ADVERTISEMENT

ಶಾಂತಿ, ಅಭಿವೃದ್ಧಿ ನಮ್ಮ ಮೂಲ ಮಂತ್ರ

ಔರಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಭು ಚವಾಣ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 8:26 IST
Last Updated 7 ಮೇ 2018, 8:26 IST
ಪ್ರಭು ಚವಾಣ್
ಪ್ರಭು ಚವಾಣ್   

ಔರಾದ್: ತಾಲ್ಲೂಕಿನ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿ ಬೆಳೆದ ಪ್ರಭು ಚವಾಣ್ 2008 ಮತ್ತು 2013ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಶಾಂತಿ ಮತ್ತು ಅಭಿವೃದ್ಧಿಯ ಆಶಯ ಇಟ್ಟುಕೊಂಡು ಈಗ ಮತ್ತೆ ಹೆಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಅವರು ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಬಾರಿ ಶಾಸಕರ ವಿರೋಧಿ ಅಲೆ ಇಲ್ಲವೆ?

ನೋಡಿ! ಕಳೆದ 10 ವರ್ಷಗಳಿಂದ ನನ್ನಿಂದ ಯಾರಿಗೂ ತೊಂದರೆಯಾಗಿಲ್ಲ. ಅನುದಾನ ಹಂಚಿಕೆ, ಅಭಿವೃದ್ಧಿ ವಿಷಯದಲ್ಲಿ ಕ್ಷೇತ್ರದ ಎಲ್ಲೆಡೆ ಸಮಾನ ಕೆಲಸ ಆಗಿದೆ. ಸಾಮಾನ್ಯ ವ್ಯಕ್ತಿಗೂ 24 ಗಂಟೆ ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ. ಯಾವೊಬ್ಬ ಅಧಿಕಾರಿ ನಾನು ಕಿರುಕುಳ ನೀಡಿದ್ದೇನೆ ಎಂದು ಹೇಳಿದರೆ ಇಂದೇ ರಾಜಕೀಯ ಬಿಡುತ್ತೇನೆ. ಎಲ್ಲ ಸಮಾಜದ ಜನರನ್ನು ಒಟ್ಟಿಗೆ ಕೊಂಡೊಯ್ಯುತ್ತೇನೆ. ಹೀಗಿರುವಾಗ ಶಾಸಕರ ವಿರೋಧಿ ಅಲೆ ಇದೆ ಎಂದು ಹೇಳಲು ಸಾಧ್ಯವೇ ಇಲ್ಲ.

ADVERTISEMENT

ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದೀರಿ ಎಂಬ ಆರೋಪವಿದೆಯಲ್ಲ?

ನಾನು ಎರಡು ಸಲ ಶಾಸಕನಾಗಲು ಕಾರ್ಯಕರ್ತರ ಶ್ರಮ ಕಾರಣ. ಪಕ್ಷ ನಿಂತಿರುವುದೇ ಕಾರ್ಯಕರ್ತರ ಮೇಲೆ. ಒಬ್ಬ ಶಾಸಕನಾದವನು ಕಾರ್ಯಕರ್ತರಿಗೆ ಏನು ಮಾಡಬೇಕು ಅದೆಲ್ಲ ಮಾಡಿದ್ದೇನೆ. ಕೆಲವರಲ್ಲಿ ಅಸಮಾಧಾನ ಇರುವುದು ಸಹಜ. ಅವರೆಲ್ಲರನ್ನು ಭೇಟಿಯಾಗಿ ಮಾತನಾಡಿಸಿದ್ದೇನೆ. ಎಲ್ಲರೂ
ಪಕ್ಷಕ್ಕಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ.

‌ನಿಮ್ಮ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಆರೋಪವಿದೆಯಲ್ಲ?

ಹಲವು ದಶಕಗಳಿಂದ ತಾಂಡಾಗಳು ಮೂಲ ಸೌಲಭ್ಯದಿಂದ ವಂಚಿತವಾಗಿದ್ದವು. ಅಂತಹ ತಾಂಡಾಗಳಿಗೆ ಕುಡಿಯುವ ನೀರು, ರಸ್ತೆ, ಶಿಕ್ಷಣದಂತಹ ಮೂಲ ಸೌಲಭ್ಯ ಕಲ್ಪಿಸುವುದು ತಪ್ಪೆ? ನಾನು ಶಾಸಕನಾದ ಮೇಲೆ ಎಲ್ಲ ಸಮುದಾಯ ಭವನಗಳಿಗೆ ಅನುದಾನ ನೀಡಿದ್ದೇನೆ. ಮನೆ ಸೇರಿದಂತೆ ವಿವಿಧ ಫಲಾನುಭವಿಗಳ ಆಯ್ಕೆಯಲ್ಲಿ ನಾನು ಎಂದೂ ಹಸ್ತಕ್ಷೇಪ ಮಾಡಿಲ್ಲ. ಅರ್ಹರಿಗೆ ಕೊಡಿ ಎಂದೇ ಅಧಿಕಾರಿಗಳಿಗೆ ಕಿವಿ ಮಾತು
ಹೇಳಿದ್ದೇನೆ.

ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?

ನಾನು 2008ರಲ್ಲಿ ಮೊದಲ ಬಾರಿಗೆ ಶಾಸಕನಾದಾಗ ತಾಲ್ಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಎರಡು ದಶಕದಿಂದ ನನೆಗುದಿಗೆ ಬಿದ್ದಿರುವ ಔರಾದ್ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ₹ 30 ಕೋಟಿ ಯೋಜನೆಗೆ ಅನುಮೋದನೆ ನೀಡಿದ್ದರು. ತಾಲ್ಲೂಕಿನಲ್ಲಿ ಸಾಕಷ್ಟು ಕಡೆ ಬ್ಯಾರೇಜ್ ಆಗಿವೆ. ನಾನು ಶಾಸಕನಾದ ಮೇಲೆಯೇ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಮೊರಾರ್ಜಿ ದೇಸಾಯಿ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಆದರ್ಶ ಶಾಲೆ ಆರಂಭವಾಗಿದೆ. ಬಹುತೇಕ ಈ ಎಲ್ಲ ಶಾಲೆಗಳಿಗೂ ಸ್ವಂತ ಕಟ್ಟಡ ಮತ್ತು ಅಗತ್ಯ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲೂ ಸಾಕಷ್ಟು ಸುಧಾರಣೆ ಆಗಿದೆ.

ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?

ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ. ನಾನು ಶಾಸಕನಾದ ಮೊದಲ ಅವಧಿಯಲ್ಲಿ ಆದಷ್ಟು ಕೆಲಸ ಎರಡನೇ ಅವಧಿಯಲ್ಲಿ ಆಗಿಲ್ಲ. ಕಾಂಗ್ರೆಸ್ ಸರ್ಕಾರ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ಷೇತ್ರದ ಜನತೆ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮ ಸಿಗಲಿದೆ.

ಚುನಾವಣೆಯಲ್ಲಿ ಗೆದ್ದರೆ ನಿಮ್ಮ ಆದ್ಯತೆ ಏನು?

ತಾಲ್ಲೂಕಿನ ರೈತರು ಒಣ ಬೇಸಾಯದ ಮೇಲೆ ಅವಲಂಬಿಸಿದ್ದಾರೆ. ಮಳೆ ಕೊರತೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಂಜ್ರಾ ನದಿ ನೀರು ತಾಲ್ಲೂಕಿನ ರೈತರಿಗೆ ತಲುಪಿಸುವ ಉದ್ದೇಶವಿದೆ. ಇಲ್ಲಿ ಉದ್ಯೋಗಾವಕಾಶಗಳು ಕಡಿಮೆ ಇವೆ. ಜನ ಹೈದರಾಬಾದ್, ಮುಂಬೈಗೆ ಹೋಗುವುದು ತಪ್ಪಬೇಕು. ಈ ನಿಟ್ಟಿನಲ್ಲಿ ಸುಮಾರು 15ರಿಂದ 20 ಸಾವಿರ ಜನರಿಗೆ ಕೆಲಸ ಸಿಗುವಂತಹ ಕಾರ್ಖಾನೆ ಸ್ಥಾಪಿಸುವ ಉದ್ದೇಶವಿದೆ. ಚುನಾವಣೆ ನಂತರ ಇದಕ್ಕೆಲ್ಲ ಸಮಯ ಕೂಡಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

-ಮನ್ಮಥಪ್ಪ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.