ADVERTISEMENT

ಶಿಕ್ಷಣದ ಸಿದ್ಧಾಂತ ಗ್ರಾಮೀಣ ಶಾಲೆಗಳಲ್ಲಿ ಕಾಣುತ್ತೇವೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 7:45 IST
Last Updated 13 ಫೆಬ್ರುವರಿ 2012, 7:45 IST

ಚಿಟಗುಪ್ಪಾ:  ಶಿಕ್ಷಣದ ಮೂಲ ಸಿದ್ಧಾಂತ ಬದುಕಿನ ಮೌಲ್ಯಗಳ ಬೋಧನೆ ಗ್ರಾಮೀಣ ಶಾಲೆಗಳಲ್ಲಿ ಮಾತ್ರ ಮಕ್ಕಳಿಗೆ ಲಭಿಸುತ್ತದೆ. ಪಟ್ಟಣಗಳ ಹೈಟೆಕ್ ಶಾಲೆಗಳಲ್ಲಿ ಲಭಿಸುವಂತಿಲ್ಲ ಎಂದು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪ್ರಶಸ್ತಿ ಪುರಸ್ಕೃತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಹಾಗೂ ಗೃಹ ಕಾರ್ಯದರ್ಶಿ ರಾಘವೇಂದ್ರ ಔರಾದಕರ್ ಹೇಳಿದ್ದಾರೆ.

ಶನಿವಾರ ಪಟ್ಟಣದಲ್ಲಿ ನಾಗರಿಕ ಸಮಿತಿ ಇಂದ ಎರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿ, ಚಿಟಗುಪ್ಪಾದಲ್ಲಿ 16 ವರ್ಷ ನನ್ನ ಬಾಲ್ಯ ಜೀವನ ಕಳೆದಿದ್ದು, ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ ಅನುಭವ ಮರೆಯುವಂತಿಲ್ಲ. ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ ಮಕ್ಕಳು ಉನ್ನತ ಹುದ್ದೆ ಪಡೆಯುತ್ತಾರೆ ಎಂಬುದಕ್ಕೆ ನಾನೇ ಮಾದರಿ ಆಗಿದ್ದೇನೆ. ರಾಜ್ಯಕ್ಕೆ ನಾನು ಗೃಹ ಕಾರ್ಯದರ್ಶಿ ಆಗಿದ್ದರೂ, ಪಟ್ಟಣದ ನಾಗರಿಕರಿಗೆ ಅವರ ಪ್ರೀತಿಯ ರಾಘು ಆಗಿಯೇ ಇದ್ದೇನೆ.

ಕೇಂದ್ರ, ರಾಜ್ಯ ಸರಕಾರಗಳು ನಡೆಸುವ ಉನ್ನತ ಹುದ್ದೆಗಳ ನೇಮಕಾತಿಗಾಗಿ ಎರ್ಪಡಿಸುವ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಗಳಿಸುವುದಕ್ಕಾಗಿ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಬೀದರ್ ಜಿಲ್ಲೆಯೆ ವಿದ್ಯಾರ್ಥಿಗಳಿಗೆ ಚಿಟಗುಪ್ಪಾ ಪಟ್ಟಣದಲ್ಲಿ ಕೆಲವೇ ದಿನಗಳಲ್ಲಿ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೃತ್ತಿ ಪರ ತರಬೇತಿ ನೀಡುವ ವಿನೂತ ಕೋರ್ಸ್ ಗಳನ್ನು ಬೋಧಿಸುವ ಕಾಲೇಜುಗಳನ್ನು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಆರಂಭಿಸಬೇಕಾಗಿದೆ.

ಕೃಷಿ, ತೋಟಗಾರಿಕೆ, ಹೈನುಗಾರಿಕೆಗಳ ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡು, ರೈತರು ಆಧುನಿಕ ಬೇಸಾಯ ಪದ್ಧತಿಯಲ್ಲಿ ಕೃಷಿ ಮಾಡಬೇಕಾದ ಅವಶ್ಯಕತೆ ಇದೆ. ಜೀವನದಲ್ಲಿ ಬೇರೆ ಒಬ್ಬರ ಮೇಲೆ ಆರೋಪ ಮಾಡುವ ಬದಲು ನಮ್ಮಲ್ಲಿಯ ಅಂತರಾತ್ಮದಲ್ಲಿಯ ಮನೋಭಾವದ ಬದಲಾವಣೆ, ಸ್ವಯಂ ಜಾಗೃತಿ ಪ್ರವೃತ್ತಿ ಬೆಳೆಸಿಕೊಳ್ಳಬೇಕು.

ನಮ್ಮ ವೃತ್ತಿಯ ಮೇಲೆ ಭಕ್ತಿ, ಮಾಡುವ ಕಾರ್ಯದಲ್ಲಿ ಶೈದ್ಧೆ, ಪ್ರಾಮಾಣಿಕತೆ ಇಂದ ದುಡಿದಲ್ಲಿ ದೇಶದ ಪ್ರಗತಿ, ಸ್ವಯಂ ಅಭಿವೃದ್ಧಿ ಆಗುತ್ತದೆ. ಶಿಕ್ಷಣದ ಜಾಗೃತಿ, ಒಗ್ಗಟ್ಟು ಯಾವುದೆ ಪ್ರದೇಶದ ಸಮಗೃ ಅಭಿವೃದ್ಧಿಗೆ ಕಾರಣ ಆಗುತ್ತವೆ ಎಂದು ತಿಳಿಸಿದರು.

ಡಾ.ರಾಜಶೇಖರ ಸ್ವಾಮೀಜಿ ಮಾತನಾಡಿ, ಔರಾದಕರ್ ಅವರ ಬದುಕು ಇಂದಿನ ಯುವ ಪೀಳಿಗೆಗೆ ದಾರಿ ದೀಪ ಆಗಿದೆ ಎಂದು ತಿಳಿಸಿದರು.

ಬಾಬಾ ಬುಖಾರಿ ಪ್ರಾಸ್ತಾವಿಕ ಮಾತನಾಡಿದರು. ಅನೀಲ ಕುಮಾರ ಸಿರಮುಂಡಿ ಪರಿಚಯಿಸಿದರು. ರಾಯಬಸವಂತರಾಯ ದೇಶಮುಖ್, ಅಶೋಕ ಗುತ್ತೆದಾರ್, ಬಸವರಾಜ್ ಪಾಟೀಲ್, ಭೀಮಣ್ಣ ಶಾಖಾ, ಪುರಸಭೆ ಉಪಾಧ್ಯಕ್ಷ ಅಹ್ಮದ್ ಪಾಶಾ, ಸೂರ್ಯಕಾಂತ ಮಠಪತಿ ಇತರರು ಉಪಸ್ಥಿತರಿದ್ದರು. ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಔರಾದಕರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.

ಪುರಸಭೆ ಅಧ್ಯಕ್ಷ ದಿಲೀಪಕುಮಾರ ಬಗ್ದಲಕರ್ ಅಧ್ಯಕ್ಷತೆ ವಹಿಸಿದ್ದರು. ಗುರುಲಿಂಗ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ನೀಲಕಂಠ ಇಸ್ಲಾಮಪೂರ ನಿರೂಪಿಸಿದರು. ಸಚೀನ ಮಠಪತಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.