ADVERTISEMENT

ಸಮಸ್ಯೆರಹಿತ ಕ್ಷೇತ್ರ ನಿರ್ಮಾಣಕ್ಕೆ ಪಣ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:20 IST
Last Updated 2 ಫೆಬ್ರುವರಿ 2011, 7:20 IST

ಹುಮನಾಬಾದ್: ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ. ಜನ ಹಾಗೂ ಜಾನುವಾರು ಆಸ್ಪತ್ರೆಗಳ ಸುಧಾರಣೆಗೆ ಆದ್ಯತೆ. ಗ್ರಾಮಗಳಲ್ಲಿ ನೂತನ ಆಸ್ಪತ್ರೆ ಸ್ಥಾಪನೆಗೆ ಆದ್ಯತೆ. ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಪ್ರೌಢ ಶಾಲೆಗಳಲ್ಲಿ ಇರುವ ಶಿಕ್ಷಕರು ಹಾಗೂ ಶಾಲಾ ಕೋಣೆ ಕೊರತೆ ನೀಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶ ಹಳ್ಳಿಖೇಡ(ಬಿ) ಜಿಲ್ಲಾ ಪಂಚಾಯಿತಿ ಕ್ಷೇತ್ರದ ನೂತನ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತಯ್ಯ ತೀರ್ಥಾ ಅವರಿಗಿದೆ.

ಸಮಸ್ಯೆಗಳು: ಕ್ಷೇತ್ರದ ಕೇಂದ್ರ ಹಳ್ಳಿಖೇಡ(ಬಿ), ಮರ್ಕ್‌ಲ್, ಅಮೀರಾಬಾದ್‌ವಾಡಿ, ಶಕ್ಕರಗಂಜವಾಡಿ ಮೊದಲಾದ ಗ್ರಾಮಗಳ ಜನತೆ ದಶಕದಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸೂಕ್ತ ರಸ್ತೆ ಇಲ್ಲದೇ ತೊಂದರೆ ಅನುಭವಿಸುತ್ತಿರುವ ಕ್ಷೇತ್ರದ ಡಾಕುಳಗಿ ಹಿಲಾಪೂರ್(3.ಕಿ.ಮೀ), ಹಳ್ಳಿಖೇಡ(ಬಿ)- ಅಲ್ಲೂರಾ - ಬೇನಚಿಂಚೋಳಿ ಸೇರಿದಂತೆ ಮೊದಲಾದ ಗ್ರಾಮಗಳ ಜನತೆ ರಸ್ತೆ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಹಳ್ಳಿಖೇಡ(ಬಿ)- ಮನ್ನಾಎಖ್ಖೆಳ್ಳಿ, ಡಾಕುಳಗಿ, ಮರ್ಕ್‌ಲ್, ಸಿತಾಳಗೇರಾ ಮೊದಲಾದ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ಸೌಕರ್ಯ ಇಲ್ಲದ ಕಾರಣ ಜೀವ ಕೈಯಲ್ಲಿ ಹಿಡಿದುಕೊಂಡು ಖಾಸಗಿ ‘ಟಂಟಂ’ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಸಿಂದಬಂದಗಿ ಮೊದಲಾದ ಗ್ರಾಮಗಳ ಜನ ಸಿಬ್ಬಂದಿ ಕೊರತೆ ಕಾರಂಣದಿಂದ ವೈದ್ಯಕೀಯ ಸೇವೆ ಇಲ್ಲದೇ ತೊಂದರೆಯಲ್ಲಿದ್ದಾರೆ.

ಪಶುವೈದ್ಯಕೀಯ ಸೇವೆಯೂ ಇದಕ್ಕೆ ಹೊರತಾಗಿಲ್ಲ. ಕ್ಷೇತ್ರದ ಮರ್ಕ್‌ಲ್ ಮೊದಲಾದ ಗ್ರಾಮಗಳಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಅಗತ್ಯ ಶಿಕ್ಷಕರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಆ ಏಕೈಕ ಕಾರಣಕ್ಕೆ ಎಸ್.ಎಸ್.ಎಲ್.ಸಿ ಫಲಿತಾಂಶ ಮೇಲೆ ಪರಿಣಾಮ ಬೀರುತ್ತಿದೆ. ಹಳ್ಳಿಖೇಡ(ಬಿ) ಗ್ರಾಮದಲ್ಲಿ ಎ.ಪಿ.ಎಂ.ಸಿ ವತಿಯಿಂದ ಗ್ರಾಮೀಣ ಸಂತೆ ನಿಮಿತ್ತ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಲಾದ ಷಡ್ ಬಳಕೆಗೆ ಬಾರದೇ ತುಕ್ಕು ಹಿಡಿಯುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆ ಆಗದೇ ಇರುವುದರಿಂದ ಕ್ಷೇತ್ರದ ಅನೇಕ ಗ್ರಾಮಗಳ ರೈತರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಸದಸ್ಯರ ಭರವಸೆ: ಕ್ಷೇತ್ರದ ಬಹುತೇಕ ಗ್ರಾಮಗಳ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ವಿಷಯ ಈಗಾಗಲೇ ಗಮನಕ್ಕೆ ಬಂದಿದೆ. ಹುಮನಾಬಾದ್ ಮತ್ತು ಚಿಟಗುಪ್ಪ ಪಟ್ಟಣಗಳಿಗೆ ಕಾರಂಜಾ ಜಲಾಶಯದಿಂದ ಕಲ್ಪಿಸಲಾಗುವ ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ಹಳ್ಳಿಖೇಡ(ಬಿ) ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹಲವು ಗ್ರಾಮಗಳಿಗೆ ಶಾಸಕ ರಾಜಶೇಖರ ಪಾಟೀಲ ಅವರ ಸಹಕಾರ ಕೋರಿ ಸೌಲಭ್ಯ ಕಲ್ಪಿಸುವೆ. ಜಿಲ್ಲಾ ಪಂಚಾಯಿತಿ ಅನುದಾನ ಜೊತೆಗೆ ಶಾಸಕ ಸಹಕಾರ ಪಡೆದು ಆದ್ಯತೆಯ ಮೇರೆಗೆ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವೆ.

ನಿರ್ಮಾಣ ಹಂತದಲ್ಲಿರುವ 110ಕೆ.ವಿ ಸಾಮರ್ಥ್ಯ ವಿದ್ಯುತ್ ವಿತರಣಾ ಘಟಕ ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಸಮರ್ಪಿಸಲು ಯತ್ನಿಸುವೆ. ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ತಪ್ಪಿದರೂ ಕಾಂಗ್ರೆಸ್ ಬಂಡುಕೋರ ಅಭ್ಯರ್ಥಿಯಾಗಿ ಸ್ಪರ್ಧಸಲು ಅವಕಾಶ ನೀಡಿದ್ದಲ್ಲದೇ, ಗೆಲುವಿಗಾಗಿ ಹಗಲಿರುಳೂ ಶ್ರಮಿಸಿದ ಕ್ಷೇತ್ರದ ಜನಪ್ರೀಯ ಶಾಸಕ ರಾಜಶೇಖರ ಪಾಟೀಲ ಹೆಸರಿಗೆ ಚ್ಯುತಿ ತರಲಾರೆ. ಮತದಾರರು ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ದ್ರೋಹ ಬಗೆಯಲಾರೆ ಎನ್ನುವುದು ಹಳ್ಳಿಖೇಡ(ಬಿ) ಜಿ.ಪಂ ಕ್ಷೇತ್ರದ ಸದಸ್ಯ ಮಹಾಂತಯ್ಯ ತೀರ್ಥಾ ಭರವಸೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.