ADVERTISEMENT

ಸಾರಿಗೆ ಸಂಸ್ಥೆಗೆ ನಿತ್ಯ ರೂ. 5 ಲಕ್ಷ ನಷ್ಟ

ಶಿಥಿಲಗೊಂಡ ಕುರಿಕೋಟಾ ಸೇತುವೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 7:05 IST
Last Updated 20 ಡಿಸೆಂಬರ್ 2012, 7:05 IST

ಬೀದರ್: ಬೀದರ್-ಗುಲ್ಬರ್ಗ ನಡುವೆ ಸಂಪರ್ಕ ಕಲ್ಪಿಸುವ ಕುರಿಕೋಟಾ ಸೇತುವೆ ಬಿರುಕು ಬಿಟ್ಟು ವಾಹನಗಳ ಸಂಚಾರಕ್ಕೆ ಅಡಚಣೆಯಾದ ಬಳಿಕ ಉಭಯ ನಗರಗಳ ನಡುವೆ ಪ್ರಯಾಣಿಸುವ ಜನರಿಗಷ್ಟೇ ಅಲ್ಲ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ನಷ್ಟ ಅನುಭವಿಸುವಂತಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಅನುಸಾರ ಸಂಸ್ಥೆಗೆ ದೈನಿಕ ಅಂದಾಜು 5 ಲಕ್ಷ ರೂಪಾಯಿ ನಷ್ಟ ಆಗುತ್ತಿದೆ. ಈ ವರ್ಷ ಜುಲೈ 3 ರಿಂದ ಕುರಿಕೋಟಾ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

ತಾತ್ಕಾಲಿಕ ದುರಸ್ತಿ ಬಳಿಕ ಈಗ ಕಳೆದ ಹದಿನೈದು ದಿನಗಳಿಂದ ಈ ಸೇತುವೆಯ ಮೂಲಕ ಕಾರು, ಟ್ರ್ಯಾಕ್ಟರ್ ಮತ್ತಿತರ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರೂ, ಬಸ್ಸುಗಳ ಸಂಚಾರಕ್ಕೆ ಈಗಲೂ ನಿರ್ಬಂಧ ಮುಂದುವರಿದಿದೆ.

ಅಧಿಕಾರಿಗಳ ಪ್ರಕಾರ, ಈ ಸೇತುವೆ ಮೂಲಕ ನಿತ್ಯ 89 ಮಾರ್ಗಗಳ ಬಸ್ಸುಗಳ ಸಂಚಾರವಿತ್ತು. ಜೊತೆಗೆ, ಗುಲ್ಬರ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ  ಐರಾವತ ಬಸ್‌ನ ಸಂಚಾರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಬೇಕಿದ್ದ ಬಸ್‌ಗಳ ಸಂಚಾರ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಸೇತುವೆಯ ಮೇಲೆ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ಇರುವ ಕಾರಣ ಬೀದರ್‌ನಿಂದ ತೆರಳುವ ಬಸ್‌ಗಳು ಸುತ್ತುವರಿದು ಗುಲ್ಬರ್ಗ ತಲುಪಬೇಕಾಗಿದೆ. ಇದರಿಂದಾಗಿ ಪ್ರಯಾಣದ ಅವಧಿಯು ಒಂದೂವರೆ ಗಂಟೆ ಹೆಚ್ಚಾಗುತ್ತಿದೆ.

ಹೀಗಾಗಿ, ಬಹತೇಕ ಪ್ರಯಾಣಿಕರು ಲಘು ವಾಹನಗಳನ್ನು ಅವಲಂಬಿಸಿದ್ದಾರೆ. ಬೀದರ್‌ನಿಂದಲೂ ಬಸ್‌ಗಿಂತಲೂ ಹೆಚ್ಚಾಗಿ ಹುಮನಾಬಾದ್‌ನಿಂ ಲಘು ವಾಹದಲ್ಲಿ ಗುಲ್ಬರ್ಗಕ್ಕೆ ಸಂಚರಿಸುವವರ ಸಂಖ್ಯೆಯೇ ಹೆಚ್ಚಾಗಿದೆ.

ಗುಲ್ಬರ್ಗಗೆ ಬಸ್‌ನಲ್ಲಿ ತೆರಳಿದರೂ ಕುರಿಕೋಟಾ ಸೇತುವೆಯ ಬಳಿ ಇಳಿದು, ಇನ್ನೊಂದು ತುದಿಯಿಂದ ಖಾಸಗಿ ವಾಹನಗಳನ್ನು ಅವಲಂಬಿಸಿ ಸ್ಥಳ ತಲುಪುವ ಬೆಳವಣಿಗೆಯೂ ಹೆಚ್ಚಿದೆ. ಈ ಎಲ್ಲವೂ ನಷ್ಟಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಈ ಕುರಿತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಮೂರ್ತಿ ಅವರನ್ನು ಸಂಪರ್ಕಿಸಿದಾಗ, `ಕುರಿಕೋಟಾ ಸೇತುವೆ ಶಿಥಿಲವಾಗಿರುವ ಕಾರಣ ಸಂಸ್ಥೆಗೆ ನಷ್ಟ ಆಗುತ್ತಿರುವುದು ನಿಜ. ಇದನ್ನು ಸರ್ಕಾರದ ಗಮನಕ್ಕೆ ಬಂದು ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳಲು ಕೋರುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.