ಹುಮನಾಬಾದ್: ಸ್ವಾವಲಂಬನೆಯಿಂದ ಮಹಿಳೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಬೀದರ್ ಸಬ್ ಇನ್‌ಸ್ಪೆಕ್ಟರ್ ಮಲ್ಲಮ್ಮ ಚೌಬೆ ಅಭಿಪ್ರಾಯಪಟ್ಟರು. ಸ್ಥಳೀಯ ಆರ್ಬಿಟ್ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಜಾಗೃತಿ ಸಮಾವೇಶ ಉದ್ಘಾಟನೆ ನೆರವೇರಿಸಿ, ಅವರು ಮಾತನಾಡಿದರು.
ರ್ಯಾಲಿ ಮೂಲಕ ಮಹಿಳೆಯರಲ್ಲಿ ಜಾಗೃತಿ ಕುರಿತು ಅರಿವು ಮೂಡಿಸಬಹುದು. ಆದರೆ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಮುಂದೆ ಬರಲು ಆತ್ಮಸ್ಥೈರ್ಯ ಅತ್ಯವಶ್ಯಕ ಎಂದು ತಿಳಿಸಿದರು. ಮಹಿಳೆ ಒಬ್ಬಳು ಕಲಿತರೆ ಇಡೀ ಕುಟುಂಬ ಕಲಿತಂತೆ ಎಂಬ ಅನುಭವಿಗಳ ವಾಣಿಯಂತೆ ಮಹಿಳೆಯರು ಮೊದಲು ಸಾಕ್ಷರರಾಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗದ ಫಾದರ್ ರಾಬರ್ಟ್ ಮೈಕೆಲ್ ಮಿರಾಂದ್ ಸರ್ಕಾರಗಳು ಮಹಿಳೆಗಾಗಿ ನೀಡಿರುವ ವಿವಿಧ ಅವಕಾಶ ಬಳಸಿಕೊಂಡು ಮುಂದೆ ಬರಲು ನಿರಂತರ ಶ್ರಮಿಸಬೇಕು ಎಂದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಉದ್ದೇಶ ಕುರಿತು ವೇದಮಣಿ ಮಾತನಾಡಿದರು. ಕಾರ್ಡ್ ನೋಂದಣಿ ಕುರಿತು ಕವಿತಾ ಹುಷಾರೆ ವಿವರಿಸಿದರು. ಹಕ್ಕು ಮತ್ತು ಕರ್ತವ್ಯಗಳ ಕುರಿತು ಲಲಿತಾ ರಾಜಕುಮಾರ ವಿಸ್ತೃತ ವಿವರಿಸಿದರು.
ಪ್ರಭಾವತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಬೀದರ್ ಸ್ವ.ಸ.ಸಂಘದ ಮಹಿಳೆಯರು ನೃತ್ಯದ ಮೂಲಕ ಸ್ವಾಗತಿಸಿದರು. ಮಮತಾ ಮತ್ತು ನಿರ್ಮಲಾ ನಿರೂಪಿಸಿದರು. ಶರಣಪ್ಪ ಪರೆಪ್ಪ ವಂದಿಸಿದರು. ಆರ್ಬಿಟ್ ಸಂಸ್ಥೆ ನಿರ್ದೇಶಕ ಫಾದರ್ ಜಗದೀಶ ಪಿಂಟೊ, ಸಹ ನಿರ್ದೇಶಕ ಫಾದರ್ ಬಾಪು, ತುಕ್ಕಾರೆಡ್ಡಿ, ಸಿಸ್ಟರ್ ಮೆಬೆಲ್, ರಾಜಕುಮಾರೆ, ರವಿ ಕೊಡ್ಡಿಕರ್, ಸುರೇಶ ಗೋರ್ನಳ್ಳಿ, ಶಿವರಾಜ.ಬಿ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.