ADVERTISEMENT

ಹೋಳಿ ಹಬ್ಬದ ಬಳಿಕ ಬಿಜೆಪಿ ಸೇರುವೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 9:44 IST
Last Updated 27 ಫೆಬ್ರುವರಿ 2018, 9:44 IST
ಮಲ್ಲಿಕಾರ್ಜುನ ಖೂಬಾ
ಮಲ್ಲಿಕಾರ್ಜುನ ಖೂಬಾ   

ಬಸವಕಲ್ಯಾಣ: ‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ನಾನು ಬಿಜೆಪಿ ಸೇರಲು ನಿರ್ಧರಿಸಿದ್ದೇನೆ’ ಎಂದು ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ಇಲ್ಲಿನ ಅನುಭವ ಮಂಟಪಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡುವುದಕ್ಕೂ ಮೊದಲು ಮಂಟಪದ ಸ್ಥಳಕ್ಕೆ ಬಂದು ಸ್ಥಳೀಯ ಬಿಜೆಪಿ ಮುಖಂಡರನ್ನು ಭೇಟಿಯಾಗಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

‘ಸದ್ಯ ಬಿಜೆಪಿ ಕಾರ್ಯಕ್ರಮಕ್ಕೆ ಬಂದಿದ್ದರೂ ಕೆಲ ದಿನಗಳ ನಂತರ ಅಧಿಕೃತವಾಗಿ ಪಕ್ಷ ಸೇರ್ಪಡೆ ಆಗಲಿದ್ದೇನೆ. ಹೋಳಿ ಹಬ್ಬದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಪಕ್ಷದ ರಾಷ್ಟ್ರೀಯ, ರಾಜ್ಯ ಮುಖಂಡರನ್ನು ಆಹ್ವಾನಿಸಿ ದೊಡ್ಡ ಸಮಾರಂಭ ಹಮ್ಮಿಕೊಂಡು ಪಕ್ಷಕ್ಕೆ ಸೇರುತ್ತೇನೆ’ ಎಂದರು.

ADVERTISEMENT

‘ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಬೇಕಾಗಿದೆ. ಸಿದ್ದರಾಮಯ್ಯ ಅವರು ಉತ್ತಮ ಕಾರ್ಯ ಮಾಡಲಿಲ್ಲ. ಜನಪರ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಬಸವಣ್ಣನವರ ಕ್ಷೇತ್ರದ ಅಭಿವೃದ್ಧಿಗೆ ನಿರ್ಲಕ್ಷ ತೋರಲಾಗಿದೆ. ಆದ್ದರಿಂದ ಈ ಪಕ್ಷವನ್ನು ಸೋಲಿಸಿ ಬಿಜೆಪಿಗೆ ಅಧಿಕಾರ ನೀಡಬೇಕಾಗಿದೆ.

ಬಸವಾದಿ ಶರಣರ ಕ್ಷೇತ್ರ ಬಸವಕಲ್ಯಾಣದ ಅಭಿವೃದ್ಧಿಗಾಗಿ ಬಿಜೆಪಿಗೆ ಹೋಗುತ್ತಿದ್ದೇನೆ’ ಎಂದು ಹೇಳಿದರು. ಅನುಭವ ಮಂಟಪದಲ್ಲಿ ಮಲ್ಲಿಕಾರ್ಜುನ ಖೂಬಾ ಅವರು ಬಿ.ಎಸ್.ಯಡಿಯೂರಪ್ಪ ಅವರ ಜತೆಗೆ ಕೆಲಕಾಲ ಮಾತುಕತೆ ನಡೆಸಿದರು.

ಊಟದ ವ್ಯವಸ್ಥೆ: ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಅಮೀತ್ ಶಾ ಅವರ ಕಾರ್ಯಕ್ರಮಕ್ಕೆ ಬಂದ ಕಾರ್ಯಕರ್ತರಿಗೆ ತಮ್ಮ ನಿವಾಸದಲ್ಲಿ ಊಟದ ವ್ಯವಸ್ಥೆ ಮಾಡಿದ್ದರು. 100ಕ್ಕೂ ಹೆಚ್ಚು ವಾಹನಗಳಲ್ಲಿ ವಿವಿಧ ಗ್ರಾಮಗಳಿಂದ ಬಂದಿದ್ದ ಕಾರ್ಯಕರ್ತರು ಅವರ ನಿವಾಸದ ಎದುರು ಜಮಾವಣೆ ಗೊಂಡಿದ್ದರು. ಮಲ್ಲಿಕಾರ್ಜುನ ಖೂಬಾ ನೇತೃತ್ವದಲ್ಲಿ ಸಭೆಯೂ ನಡೆಯಿತು. ಎಲ್ಲ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಆಗುವಂತೆ ಅವರನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.