ADVERTISEMENT

‘ಬಸವಣ್ಣ, ತುಕಾರಾಮ ತತ್ವದಲ್ಲಿ ಸಾಮ್ಯತೆ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2013, 9:24 IST
Last Updated 21 ನವೆಂಬರ್ 2013, 9:24 IST

ಬಸವಕಲ್ಯಾಣ: ಬಸವಣ್ಣ ಮತ್ತು ಸಂತ ತುಕಾರಾಮರ ತತ್ವದಲ್ಲಿ ಸಾಮ್ಯತೆ ಇದೆ. ಸಮಾನತೆಯ ಹರಿಕಾರರಾಗಿದ್ದ ಇಬ್ಬರೂ ಉಚ್ಛ ಕುಲದವರಿಂದ ಸಾಕಷ್ಟು ಸಂಕಟ ಅನುಭವಿಸಿದ್ದಾರೆ ಎಂದು ಮಹಾರಾಷ್ಟ್ರದ ವಿದ್ರೋಹಿ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪಾರ್ಥ ಪೋಳಕೆ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಬುಧವಾರ ವಿದ್ರೋಹಿ ಸಾಂಸ್ಕೃತಿಕ ಸಂಘಟನೆ ವತಿಯಿಂದ ಹಮ್ಮಿಕೊಂಡ ‘ಶರಣರ ನಾಡು ಬಸವಕಲ್ಯಾಣದಿಂದ ಸಂತ ತುಕಾರಾಮರ ಸ್ಥಳ ಪುಣೆ ಹತ್ತಿರದ ದೇಹುವರೆಗಿನ ಸಮಾನತೆಯ ಜ್ಯೋತಿ ಯಾತ್ರೆ’ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬುದ್ಧನಿಂದ ಅಂಬೇಡ್ಕರ್‌­ವರೆಗೆ ಅನೇಕರು ಜಾತಿ ವ್ಯವಸ್ಥೆ ವಿರುದ್ಧ ಬಂಡೆದ್ದರು. ಬುದ್ಧನನ್ನು ನಂಬಿದ ಜಪಾನ್‌, ಚೀನಾ ದೇಶಗಳು ಜಗತ್ತಿನಲ್ಲಿಯೇ ಮುಂದುವರೆದ ದೇಶಗಳಾಗಿವೆ. ಬುದ್ಧ ಹುಟ್ಟಿದ ಭಾರತ ಮಾತ್ರ ಆತನ ತತ್ವಕ್ಕೆ ಬೆಲೆಕೊಡದ ಕಾರಣ ಹಿಂದುಳಿದಿದೆ ಎಂದರು. ವಿದ್ರೋಹಿ ಸಂಘಟನೆ ಮಹಾರಾಷ್ಟ್ರ­ದಲ್ಲಿ 10 ವರ್ಷದಿಂದ ಸಮಾನತೆಗಾಗಿ ಚಳವಳಿ ನಡೆಸುತ್ತಿದೆ ಎಂದು ತಿಳಿಸಿದರು. ಉದ್ಘಾಟನೆ ನೆರವೇರಿಸಿದ ­ಬೆಲ್ದಾಳ ಸಿದ್ಧರಾಮ ಶರಣರು ಮಾತನಾಡಿ, ಬುದ್ಧ ಮತ್ತು ಬಸವಣ್ಣ ಧರ್ಮ ಸ್ಥಾಪಕರಲ್ಲ. ಕೇವಲ ತತ್ವ ಸಾರಿದರು. ನಾವು ಅವರ ಹೆಸರಲ್ಲಿ ಧರ್ಮ ಸೃಷ್ಟಿಸಿದ್ದೇವೆ ಎಂದರು.

ಮರಾಠಿ ಸಾಹಿತಿ ಆರ್.ಹ. ಸಾಳುಂಕೆ ಮಾತನಾಡಿ, ಕನ್ನಡ ಮತ್ತು ಮರಾಠಿ ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮಹಾರಾಷ್ಟ್ರದಲ್ಲಿ ಬಸವಣ್ಣನವರಿಗೆ ಸಾಕಷ್ಟು ಗೌರವ ನೀಡಲಾಗುತ್ತದೆ ಎಂದು ಹೇಳಿದರು. ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಾಹಿತಿ ಡಾ.ಕಾಶಿನಾಥ ಅಂಬಲಗೆ, ಏಕನಾಥ ಆವಾಡ, ರಾಜಾಭಾವು, ಬಾಬುರಾವ ಗುರವ, ಫಾದರ್ ಬೆಂಜಮಿನ್ ಡಿಸೋಜಾ ಮಾತನಾಡಿದರು.

ಬೇಲೂರ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಭಾಲ್ಕಿ ಗುರುಬಸವ, ಡಾ.ಅಮರನಾಥ ಸೊಲ್ಲಾಪುರೆ ಇದ್ದರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ ಲಾತೂರೆ ಸ್ವಾಗತಿಸಿದರು. ರಾಜೀವ ಭಾಲ್ಕಿ ನಿರೂಪಿಸಿದರು. ವೀರಣ್ಣ ಹಲಶೆಟ್ಟಿ ವಂದಿಸಿದರು. ಮರಾಠಿಗೆ ಅನುವಾದಿಸಿದ ವಚನ ಸಾಹಿತ್ಯದ 12 ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.