ADVERTISEMENT

‘ಸಾಹಿತ್ಯದ ಸತ್ವ ಹೆಚ್ಚಲು ವಿಮರ್ಶೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 6:26 IST
Last Updated 23 ಸೆಪ್ಟೆಂಬರ್ 2013, 6:26 IST

ಬೀದರ್‌: ‘ಸತ್ವಯುತವಾದ ಸಾಹಿತ್ಯ ಕೃತಿಗಳು ಹೆಚ್ಚಬೇಕು ಎಂಬ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಸಾಹಿತಿಗಳ ಕೃತಿಗಳನ್ನು ವಿಮರ್ಶೆಗೆ ಒಳಪಡಿಸಬೇಕಾದ ಅಗತ್ಯವಿದೆ’ ಎಂದು ಸಾಹಿತಿ ಪ್ರೇಮಾ ಹೂಗಾರ ಅಭಿಪ್ರಾಯಪಟ್ಟರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ನಗರದ ಸರಸ್ವತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ಜಿಲ್ಲಾ ಯುವ ಮಹಿಳಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಬಹುತೇಕ ಸಾಹಿತ್ಯ ಕೃತಿಗಳು ವಿಮರ್ಶೆಗೆ ಒಳಪಡುತ್ತಿಲ್ಲ. ಇದರಿಂದಾಗಿ ಒಟ್ಟು ಸಾಹಿತ್ಯ ಕೃತಿಗಳ ಸಂಖ್ಯೆ ಹೆಚ್ಚಾದರೂ, ಸತ್ವಯುತವಾದ ಕೃತಿಗಳು ಕಡಿಮೆ ಎಂದೇ ಹೇಳಬೇಕು. ಹೀಗಾಗಿ, ವಿಮರ್ಶೆ ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಚುಟುಕು ಸಾಹಿತಿಗಳಿಗೆ ಪ್ರೋತ್ಸಾ್ಸಹ ಇಲ್ಲದ ಕಾರಣ ಈ ಪ್ರಕಾರದ ಸಾಹಿತ್ಯದ ಪ್ರಗತಿ ಮಂದಗತಿಯಿಂದ ಸಾಗುತ್ತಿದೆ. ಯುವ ಬರಹಗಾರರ ಪ್ರತಿಭೆಯನ್ನು ಬೆಳಕಿಗೆ ತರುವ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು ಎಂದು ಸಲಹೆ ನೀಡಿದರು.

ಸಾಹಿತ್ಯ ಓದುವ ಆಸಕ್ತರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಗಳ ವ್ಯವಸ್ಥೆ ಮಾಡಬೇಕು, ಕನ್ನಡ ಭಾಷೆ ಉಳಿಸಿ, ಬೆಳೆಸಲು ಕನ್ನಡ ಶಾಲೆಗಳಿಗೆ ಉತ್ತೇಜನ ನೀಡಬೇಕಾದ ಅನಿವಾರ್ಯವಿದೆ ಎಂದು ನುಡಿದರು.

ಮಹಿಳೆಯರ ಮೇಲಿನ ಶೋಷಣೆ ವಿರುದ್ಧದ ಲೇಖನಗಳ ಮೂಲಕ  ಬೆಳಕು ಚೆಲ್ಲಲು ಯುವ ಬರಹಗಾರರು ಮುಂದಾಗಬೇಕು ಎಂದು ಸಮ್ಮೇಳನ ಉದ್ಘಾಟಿಸಿದ ಮೈಸೂರಿನ ರತ್ನಾ ಹಾಲಪ್ಪಗೌಡ ಸಲಹೆ ಮಾಡಿದರು.

ಉಮಾ ಬಾಪುರೆ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್‌ ಇದ್ದರು. ಶಂಭು­ಲಿಂಗ ವಾಲ್ದೊಡ್ಡಿ ಸ್ವಾಗತಿ­ಸಿದರು. ಶೋಭಾ ಮಂಗಳೂರೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.