ADVERTISEMENT

ಕೋವಿಡ್ ನಂತರ ಖಿನ್ನತೆ ಹೆಚ್ಚಳ

ಆಪ್ತ ಸಮಾಲೋಚಕರ ಕಾರ್ಯಾಗಾರದಲ್ಲಿ ಡಾ.ಚಂದ್ರಶೇಖರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 14:32 IST
Last Updated 6 ಮಾರ್ಚ್ 2021, 14:32 IST
ಬೀದರ್‌ನ ಸನ್‍ಸಾಫ್ಟ್ ಕಾಲೇಜಿನಲ್ಲಿ ಶನಿವಾರ ಆರಂಭವಾದ ಹವ್ಯಾಸಿ ಆಪ್ತ ಸಮಾಲೋಚಕರ ಉಚಿತ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿದರು. ವಿನೋದ, ಬಜರಂಗ ಚವಾಣ್, ಡಾ. ಸಿ.ಆರ್. ಚಂದ್ರಶೇಖರ, ರೇವಣಸಿದ್ದಪ್ಪ ಜಲಾದೆ ಇದ್ದರು
ಬೀದರ್‌ನ ಸನ್‍ಸಾಫ್ಟ್ ಕಾಲೇಜಿನಲ್ಲಿ ಶನಿವಾರ ಆರಂಭವಾದ ಹವ್ಯಾಸಿ ಆಪ್ತ ಸಮಾಲೋಚಕರ ಉಚಿತ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿದರು. ವಿನೋದ, ಬಜರಂಗ ಚವಾಣ್, ಡಾ. ಸಿ.ಆರ್. ಚಂದ್ರಶೇಖರ, ರೇವಣಸಿದ್ದಪ್ಪ ಜಲಾದೆ ಇದ್ದರು   

ಬೀದರ್: ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ದೇಶದಲ್ಲಿ ಖಿನ್ನತೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಹೇಳಿದರು.

ನಗರದ ಗುಂಪಾ ರಸ್ತೆಯಲ್ಲಿ ಇರುವ ಸನ್‍ಸಾಫ್ಟ್ ಪದವಿ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಮತ್ತು ವಿಕಾಸ ಅಕಾಡೆಮಿ ವತಿಯಿಂದ ಶನಿವಾರ ಆರಂಭವಾದ ಐದು ದಿನಗಳ ಹವ್ಯಾಸಿ ಆಪ್ತ ಸಮಾಲೋಚಕರ ಉಚಿತ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೊದಲು ಖಿನ್ನತೆಯ ಪ್ರಮಾಣ ಶೇ 5 ರಷ್ಟು ಇತ್ತು. ಇದೀಗ ಶೇ 15ಕ್ಕೆ ಏರಿಕೆಯಾಗಿದೆ. ಹಣಕಾಸು, ಕೌಟುಂಬಿಕ ಸಮಸ್ಯೆ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳೂ ಖಿನ್ನತೆಗೆ ಕಾರಣವಾಗುತ್ತಿವೆ ಎಂದು ತಿಳಿಸಿದರು.

ADVERTISEMENT

ಆತ್ಮವಿಶ್ವಾಸ, ಉಲ್ಲಸಿತ ಮನಸ್ಸು ಹಾಗೂ ಒತ್ತಡಮುಕ್ತ ಜೀವನ ಶೈಲಿಯಿಂದ ಖಿನ್ನತೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಛಲ ಹಾಗೂ ಏಕಾಗ್ರತೆ ಇದ್ದಲ್ಲಿ ಯಾವುದೇ ಕೆಲಸದಲ್ಲಿ ಯಶಸ್ಸು ಗಳಿಸಬಹುದು ಎಂದು ಅಭಿಪ್ರಾಯಪಟ್ಟರು.

ಶಿಬಿರವನ್ನು ಉದ್ಘಾಟಿಸಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ಶಿಬಿರ ಹಾಗೂ ತರಬೇತಿ ಕಾರ್ಯಕ್ರಮಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ನುಡಿದರು.

ಮನಸ್ಸು ಪರಿಶುದ್ಧವಾಗಿದ್ದರೆ ನಾವು ಮಾಡುವ ಪ್ರತಿ ಕೆಲಸವೂ ಸುಸೂತ್ರ ಆಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕರೂ ಆದ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ವಿಕಾಸ ಅಕಾಡೆಮಿಯು ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಐದು ವರ್ಷಗಳ ಅವಧಿಯ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಹತ್ತು ಕಡೆಗಳಲ್ಲಿ ಹವ್ಯಾಸಿ ಆಪ್ತ ಸಮಾಲೋಚಕರ ಉಚಿತ ತರಬೇತಿ ಕಾರ್ಯಾಗಾರದ ಗುರಿ ಇದೆ. ಈಗಾಗಲೇ ಏಕಕಾಲಕ್ಕೆ ಐದು ಕಡೆಗಳಲ್ಲಿ ಕಾರ್ಯಾಗಾರ ನಡೆಯುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣವೇ ಅಕಾಡೆಮಿಯ ಗುರಿಯಾಗಿದೆ ಎಂದು ಹೇಳಿದರು.

ವಿಕಾಸ ಅಕಾಡೆಮಿ ನಗರ ಸಂಚಾಲಕ ಕಾಮಶೆಟ್ಟಿ ಚಿಕ್ಕಬಸೆ, ತಾಲ್ಲೂಕು ಪ್ರಬಂಧಕ ವಿನೋದ್, ರೇವಣಸಿದ್ದ ಜಾಡರ್, ಸನ್‍ಸಾಫ್ಟ್ ಕಾಲೇಜು ಕಾರ್ಯದರ್ಶಿ ಜಗಮೋಹನ್ ರಾಜಪೂತ್, ಬಜರಂಗ ಚವಾಣ್, ಸೋಮನಾಥ ಮಂದಕನಳ್ಳಿ, ಇದ್ದರು. ಶಿವನಾಥ ಸ್ವಾಮಿ ನಿರೂಪಿಸಿದರು. ಗಣೇಶ ಹಡಪದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.