ADVERTISEMENT

ಹೊಸ ಕಾರಾಗೃಹಕ್ಕೆ ₹ 100 ಕೋಟಿ: ಸಚಿವ ಸಂಪುಟ ಒಪ್ಪಿಗೆ

ಸಚಿವ ಪ್ರಭು ಚವಾಣ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 10:43 IST
Last Updated 6 ಫೆಬ್ರುವರಿ 2020, 10:43 IST
ಪ್ರಭು ಚವಾಣ್‌
ಪ್ರಭು ಚವಾಣ್‌   

ಬೀದರ್: ತಾಲ್ಲೂಕಿನ ಕೊಳಾರ (ಬಿ) ಸಮೀಪ 1000 ಕೈದಿಗಳ ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ ₹ 100 ಕೋಟಿ ಬಿಡುಗಡೆ ಮಾಡಲು ಬೆಂಗಳೂರಲ್ಲಿ ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

1920ರಲ್ಲಿ ಕಟ್ಟಲಾದ ಕಾರಾಗೃಹ ಬಹಳ ಹಳೆಯದಾಗಿದೆ. ಹೀಗಾಗಿ ಹೊಸ ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಸಿ ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು.

ಈಗಿನ ಕಾರಾಗೃಹದಲ್ಲಿ ಕೇವಲ 116 ಕೈದಿಗಳನ್ನು ಮಾತ್ರ ಇಡಬಹುದಾಗಿದೆ. ಆದರೆ 200ಕ್ಕೂ ಅಧಿಕ ವಿಚಾರಣಾಧೀನ ಕೈದಿಗಳು ಇದ್ದಾರೆ. ಇಲ್ಲಿ ಮೂಲಸೌಕರ್ಯದ ಕೊರತೆಯೂ ಇದೆ. ಸ್ಥಳದ ಕೊರತೆಯಿಂದ ಅನೇಕ ಕೈದಿಗಳನ್ನು ಕಲಬುರ್ಗಿ ಕಾರಾಗೃಹಕ್ಕೆ ಕಳಿಸಲಾಗುತ್ತದೆ.

ADVERTISEMENT

ಜಿಲ್ಲಾ ಕಾರಾಗೃಹ ನಗರದ ಮಧ್ಯದಲ್ಲಿ ಇದೆ.ಸುತ್ತಮುತ್ತ ಅನೇಕ ಖಾಸಗಿ ಕಟ್ಟಡಗಳು ನಿರ್ಮಾಣವಾಗಿರುವ ಕಾರಣ ಕಾರಾಗೃಹದ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೋಳಾರ(ಬಿ) ಗ್ರಾಮದ ಸರ್ವೇ ನಂ.23ರಲ್ಲಿ ಮಂಜೂರಾಗಿರುವ 49 ಎಕರೆ ಜಮೀನಿನಲ್ಲಿ ನೂತನ ಕೇಂದ್ರ ಕಾರಾಗೃಹವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವ ಪ್ರಭು ಚವಾಣ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.