ADVERTISEMENT

ಗಡಿಯಲ್ಲಿ 16 ಕ್ವಿಂಟಲ್‌ ಜಿಲೆಟಿನ್‌ ಜಪ್ತಿ

ಬೀದರ್‌ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 23:39 IST
Last Updated 25 ಫೆಬ್ರುವರಿ 2021, 23:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೀದರ್​: ಬೀದರ್ ತಾಲ್ಲೂಕಿನ ಸುಲ್ತಾನಪುರ ಬಳಿ ತೆಲಂಗಾಣ ಗಡಿಯಲ್ಲಿ ಪೊಲೀಸರು ದಾಳಿ ನಡೆಸಿ 16 ಕ್ವಿಂಟಲ್‌ ಜಿಲೆಟಿನ್‌ ಜಪ್ತಿ ಮಾಡಿದ್ದಾರೆ.

‘ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಅವರಿಗೆ ಸೇರಿದ ಜಿ.ಕೆ.ಕನ್‌ಸ್ಟ್ರಕ್ಷನ್‌ ಕ್ರಶರ್‌ ಯಂತ್ರದ ಸಮೀಪ ತಲಾ 25 ಕೆ.ಜಿ. ತೂಕದ 67 ಬಾಕ್ಸ್‌ ಜಿಲೆಟಿನ್‌ ಕಡ್ಡಿಗಳು, 500 ಮೀಟರ್‌ ಅಳತೆಯ ನಾನ್‌ ಎಲೆಕ್ಟ್ರಿಕ್ ಡೆಟೋನೇಟರ್ ಹಾಗೂ ಒಂದು ಟಿಪ್ಪರ್ ಜಪ್ತಿ ಮಾಡಲಾಗಿದೆ. ಜಿ.ಕೆ.ಕನ್‌ಸ್ಟ್ರಕ್ಷನ್‌ ಮಾಲೀಕ ಗುರುನಾಥ ಕೊಳ್ಳೂರ ಹಾಗೂ ಟಿಪ್ಪರ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರ್ಗಿ ಐಜಿಪಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಬಸವೇಶ್ವರ ಹೀರಾ, ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್‌ಐ ಸುವರ್ಣಾ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ADVERTISEMENT

‘ಬುಧವಾರ ರಾತ್ರಿ ದಾಳಿ ನಡೆಸಲಾಗಿದೆ. ಕಲ್ಲು ಕ್ವಾರಿ ತೆಲಂಗಾಣ ಗಡಿಯಲ್ಲಿದೆ. ಜಿ.ಕೆ.ಕನ್‌ಸ್ಟ್ರಕ್ಷನ್‌ ಕ್ರಶರ್‌ ಯಂತ್ರ ತೆಲಂಗಾಣ ಗಡಿಯಲ್ಲೇ ಇರುವ ಕಾರಣ ರಾಜ್ಯದ ಸೀಮೆ ವ್ಯಾಪ್ತಿಯನ್ನು ಖಚಿತ ಪಡಿಸಿಕೊಳ್ಳಲು ಸಮಯ ಬೇಕಾಯಿತು. ಜಿಲೆಟಿನ್‌ ಕಡ್ಡಿ ಇಡಲಾದ ಪ್ರದೇಶ ಬೀದರ್‌ ತಾಲ್ಲೂಕಿನ ಗಡಿಯೊಳಗೇ ಇದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ’ ಎಂದುಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ತಿಳಿಸಿದ್ದಾರೆ.

‘ಜಿ.ಕೆ.ಕನ್‌ಸ್ಟ್ರಕ್ಷನ್‌ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸೂಚನೆಯನ್ನೂ ನೀಡಲಾಗಿದೆ. ಪ್ರಕರಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕುರಿತು ತನಿಖೆ ಮುಂದುವರಿದಿದೆ’ ಎಂದು ಅವರು ಹೇಳಿದ್ದಾರೆ.

‘ಜಿ.ಕೆ.ಕನ್‌ಸ್ಟ್ರಕ್ಷನ್‌ ತೆಲಂಗಾಣದ ಗಡಿಯೊಳಗೆ ಕಲ್ಲು ಗಣಿಗಾರಿಕೆ ನಡೆಸುತ್ತಿರಬಹುದು. ಬೀದರ್ ಜಿಲ್ಲೆಯೊಳಗೆ ಅವರಿಗೆ ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಜಿಲೆಟಿನ್‌ ಸ್ಫೋಟಕ ಬಳಕೆಯ ಅನುಮತಿ ಕೊಡುವವರು ಪೊಲೀಸರು. ಹೀಗಾಗಿ ಸಂಬಂಧಪಟ್ಟ ಪೊಲೀಸ್‌ ಠಾಣೆಗಳೇ ಅದಕ್ಕೆ ಹೊಣೆಯಾಗಿರುತ್ತವೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಮೂರನೇ ಪ್ರಕರಣ: ‘ಕಳೆದ ವರ್ಷ ಭಾಲ್ಕಿ ತಾಲ್ಲೂಕಿನ ಮಾಂಜ್ರಾ ನದಿ ಸಮೀಪ ಕ್ವಾರಿಯಲ್ಲಿ ಬಳಸಲು ಸಂಗ್ರಹಿಸಿದ್ದ ಜಿಲೆಟಿನ್‌ ಕಡ್ಡಿಯನ್ನು ವಶ ಪಡಿಸಿಕೊಳ್ಳಲಾಗಿತ್ತು. 25 ದಿನಗಳ ಹಿಂದೆ ಜನವಾಡ ಪೊಲೀಸರು ಬೀದರ್ ತಾಲ್ಲೂಕಿನ ನಾಗರೆ ಸ್ಟೋನ್‌ ಕ್ರಶರ್‌ ಮೇಲೆ ದಾಳಿ ನಡೆಸಿ 9 ಜಿಲೆಟಿನ್‌ ಕಡ್ಡಿಗಳನ್ನು ವಶಪಡಿಸಿಕೊಂಡು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಎರಡು ವರ್ಷಗಳಲ್ಲಿ ಇದು ಮೂರನೇ ಪ್ರಕರಣ ಆಗಿದೆ’ ಎಂದು ಎಸ್ಪಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.