ADVERTISEMENT

200 ವರ್ಷ ಹಿಂದಿನ ಭವ್ಯ ಬಂಗಲೆ!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2011, 9:30 IST
Last Updated 8 ನವೆಂಬರ್ 2011, 9:30 IST
200 ವರ್ಷ ಹಿಂದಿನ ಭವ್ಯ ಬಂಗಲೆ!
200 ವರ್ಷ ಹಿಂದಿನ ಭವ್ಯ ಬಂಗಲೆ!   

ಔರಾದ್: ಇಲ್ಲಿಗೆ ಸಮೀಪದ ಗ್ರಾಮವೊಂದರಲ್ಲಿ ಎರಡುನೂರು ವರ್ಷ ಹಳೆಯದಾದ ಭವ್ಯ ಬಂಗಲೆವೊಂದು ಇಂದಿಗೂ ಜನಾಕರ್ಷಣೆ ಕೇಂದ್ರವಾಗಿದೆ.

ಔರಾದ್ ತಾಲ್ಲೂಕು ಕೇಂದ್ರದಿಂದ ಕೇವಲ ಏಳು ಕಿ.ಮೀ. ಅಂತರದಲ್ಲಿರುವ ಎಕಂಬಾ ಗ್ರಾಮದಲ್ಲಿ ಇಂಥದೊಂದು ಬಂಗಲೆ ಇದೆ. ಮಾಜಿ ಶಾಸಕ ಎಂಇಎಸ್‌ನ ದಿವಂಗತ ಬಾಪುರಾವ ಪಾಟೀಲರ ಬಂಗಲೆ ಇದಾಗಿದೆ. ಸದ್ಯ ಈ ಬಂಗಲೆಯಲ್ಲಿ ಅವರ ಎರಡನೇ ಮಗ ಕಾಂಗ್ರೆಸ್ ಧುರೀಣ ಅರುಣ ಪಾಟೀಲ ವಾಸವಾಗಿದ್ದಾರೆ.

ಒಂದು ಎಕರೆ ಪ್ರದೇಶದಲ್ಲಿ ಮೂರು ಅಂತಸ್ತಿನ ಈ ಮನೆ ಈಗಲೂ ನೋಡಲು ಸುಂದರವಾಗಿವೆ. 30 ಕೋಣೆಗಳಿರುವ ಬಂಗಲೆಯಲ್ಲಿ ಸುಮಾರು 200 ಜನ ಕೂಡುವ ಸಭಾಂಗಣವೊಂದು ಇದೆ. ಈ ಮನೆ ಕಟ್ಟಿರುವ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ 200 ವರ್ಷ ಹಿಂದಿನದ್ದು ಎಂದು ಮನೆಯವರು ಅಂದಾಜಿಸುತ್ತಾರೆ.

ಮನೆಯ ಹೊರಗಿನ ಭಾಗ ಕಪ್ಪು ಕಲ್ಲು ಬಳಸಿ ಕಟ್ಟಲಾಗಿದೆ. ಮಾಳಿಗೆ, ಬಾಗಿಲು, ಕಿಟಕಿಗಳಿಗೆ ಸಾಗುವಾನಿ ಕಟ್ಟಿಗೆ ಬಳಸಲಾಗಿದೆ. ಕಟ್ಟಿಗೆ ಮೇಲೆ ಕೆತ್ತಲಾದ ಕಲಾವಿದರ ಅದ್ಭುತ ಕಲೆ ಇಲ್ಲಿ ನೋಡಲು ಸಿಗುತ್ತದೆ. ಸಣ್ಣಪುಟ್ಟ ನಿರ್ವಹಣೆ ಹೊರತುಪಡಿಸಿ ಕಟ್ಟಡದ ಯಾವುದೇ ಭಾಗ ಮಾರ್ಪಾಡಾಗಲಿ, ದುರಸ್ತಿಯಾಗಲಿ ಮಾಡಿಲ್ಲ.

ನಮ್ಮ ಪೂರ್ವಜರು ಕಟ್ಟಿದ ಈ ಬಂಗಲೆ ಈ ಭಾಗದಲ್ಲಿ ಅತ್ಯಂತ ಪ್ರಸಿದ್ಧಿಯಾಗಿದೆ. ಬೇರೆ ಬೇರೆ ಕಡೆಗಳಿಂದ ಜನ ಬಂಗಲೆ ನೋಡಲು ಬರುತ್ತಾರೆ. ಸಿಮಿಮಾ ಮತ್ತು ಧಾರವಾಹಿ ನಿರ್ಮಾಪಕರು ಶೂಟಿಂಗ್‌ಗಾಗಿ ಬಂದು ಹೋಗಿದ್ದಾರೆ ಎಂದು ಮನೆ ಮಾಲೀಕ ಅರುಣ ಪಾಟೀಲ ಹೇಳುತ್ತಾರೆ.

ಕೃಷಿ ಕುಟುಂಬ: 400 ಎಕರೆ ಜಮೀನು ಹೊಂದಿರುವ ಅರುಣ ಪಾಟೀಲ ಮತ್ತು ಮೂವರು ಸಹೋದರರು ಈಗಲೂ ಅನ್ಯೋನ್ಯತೆಯಿಂದ ಇದ್ದಾರೆ. ಒಬ್ಬ ಸಹೋದರ ವಿದೇಶದಲ್ಲಿದ್ದರೆ ಮೊತ್ತಬ್ಬರು ಮಹಾರಾಷ್ಟ್ರ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾರೆ. ತಂದೆ ಮಾಜಿ ಶಾಸಕ ಬಾಪುರಾವ ಪಾಟೀಲ ನಿಧನದ ನಂತರ ಇಡೀ ಕುಟುಂಬದ ಜವಾಬ್ದಾರಿ ಅರುಣ ಪಾಟೀಲರು ವಹಿಸಿಕೊಳ್ಳಬೇಕಾಯಿತು.

ಎಂ.ಎಸ್ಸಿ. ಅಗ್ರಿ ಪದವೀಧರರಾದ ಇವರು ತೋಟಗಾರಿಕೆ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಗುಡ್‌ಬೈ ಹೇಳಿ ತಂದೆಗೆ ರಾಜಕೀಯ ಮತ್ತು ಕೃಷಿ ಕೆಲಸದಲ್ಲಿ ಸಾಥ್ ನೀಡಿದರು. ತಂದೆ ನಿಧನದ ನಂತರ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದರೂ ಯಶಸ್ಸು ಕಾಣಲಿಲ್ಲ. ಹೀಗಾಗಿ ರಾಜಕೀಯದಿಂದ ದೂರ ಉಳಿದು ಕೃಷಿ ಮತ್ತು ತಮ್ಮ ಇತರೆ ಖಾಸಗಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸದ್ಯ ಇವರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡರೂ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಈಗಿನ ರಾಜಕೀಯ ವ್ಯವಸ್ಥೆ ನೋಡಿದರೆ ಇರುವ ನಮ್ಮ ವ್ಯವಹಾರ ನೋಡಿಕೊಂಡು ಹೋದರೆ ಸಾಕು. ಅದಕ್ಕಿಂತ ದೊಡ್ಡ ಗೌರವ ಬೇರೆಲ್ಲಿ ಸಿಗುತ್ತದೆ ಎಂದು ತಮ್ಮ ಕೃಷಿ ಕಾಯಕದ ಬಗ್ಗೆ ಪಾಟೀಲ ತೃಪ್ತಿ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.