ADVERTISEMENT

ಬಸವಕಲ್ಯಾಣ| ಶಿವಸೃಷ್ಟಿಗೆ ₹3 ಕೋಟಿ, ಸಂಭಾಜಿ ಪ್ರತಿಮೆ ಸ್ಥಾಪನೆ: ಶಾಸಕ ಶರಣು ಸಲಗರ

​ಪ್ರಜಾವಾಣಿ ವಾರ್ತೆ
Published 24 ಮೇ 2025, 13:12 IST
Last Updated 24 ಮೇ 2025, 13:12 IST
ಬಸವಕಲ್ಯಾಣದಲ್ಲಿ ಶನಿವಾರ ನಡೆದ ಶಿವಸೃಷ್ಟಿ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ದೊಡ್ಡನಗೌಡ ಪಾಟೀಲ, ಶಾಸಕರುಗಳಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಶನಿವಾರ ನಡೆದ ಶಿವಸೃಷ್ಟಿ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ದೊಡ್ಡನಗೌಡ ಪಾಟೀಲ, ಶಾಸಕರುಗಳಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಛತ್ರಪತಿ ಶಿವಾಜಿ ಮಹಾರಾಜರ ಸಾಧನೆ ಪ್ರತಿಬಿಂಬಿಸುವ 10 ಎಕರೆಯಲ್ಲಿ ನಿರ್ಮಿಸುತ್ತಿರುವ ‘ಶಿವಸೃಷ್ಟಿ’ ಜಾಗದಲ್ಲಿ ₹1 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇನ್ನೂ ₹2 ಕೋಟಿ ಮಂಜೂರು ಮಾಡುತ್ತೇನೆ. ಇಲ್ಲಿ ಛತ್ರಪತಿ ಸಂಭಾಜಿರಾಜೇ ಪ್ರತಿಮೆ ಪ್ರತಿಷ್ಠಾಪನೆಗೆ ವೈಯಕ್ತಿಕವಾಗಿ ₹25 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಗರದ ಸಸ್ತಾಪುರ ರಸ್ತೆ ಸಮೀಪದಲ್ಲಿ ನಿರ್ಮಿಸುತ್ತಿರುವ ಶಿವಸೃಷ್ಟಿ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರ ಈ ಕೆಲಸಕ್ಕೆ ನೀಡಿದ್ದ ₹10 ಕೋಟಿ ಇಂದಿನ ಸರ್ಕಾರ ಹಿಂದಕ್ಕೆ ಪಡೆದಿದೆ. ಅದರ ಬಿಡುಗಡೆಗೆ ಮತ್ತೆ ಮನವಿ ಸಲ್ಲಿಸುತ್ತೇನೆ. ಈಗ ಆವರಣಗೋಡೆ ನಿರ್ಮಿಸಿ ಮೂಲಸೌಕರ್ಯ ಒದಗಿಸುವ ಕೆಲಸ ಚಾಲ್ತಿಯಲ್ಲಿದೆ’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಮಾತನಾಡಿ, ‘ಮಹಾತ್ಮ ಬಸವೇಶ್ವರರು ಮತ್ತು ಶಿವಾಜಿ ಮಹಾರಾಜ ಇಬ್ಬರೂ ಜನಪರ ಕಾರ್ಯ ಕೈಗೊಂಡರು. ಆದ್ದರಿಂದ ಒಂದೇ ನಗರದಲ್ಲಿ ಇಬ್ಬರ ಸ್ಮಾರಕವಿದ್ದರೆ ಜಗತ್ತಿಗೆ ಉತ್ತಮ ಸಂದೇಶ ಹೋಗಬಹುದು. ಶಾಸಕ ಸಲಗರ ಅವರು ಇದಕ್ಕಾಗಿ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ಮುಂದಿನ ವರ್ಷ ನನ್ನ ಅನುದಾನದಲ್ಲೂ ಹಣ ಒದಗಿಸುತ್ತೇನೆ’ ಎಂದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಶಿವಸೃಷ್ಟಿ ಟ್ರಸ್ಟ್ ಕಾರ್ಯದರ್ಶಿ ತಾತೇರಾವ್ ಪಾಟೀಲ ಮಂಗಳೂರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ, ರತಿಕಾಂತ ಕೊಹಿನೂರ, ಶಂಕರರಾವ್ ನಾಗದೆ ಮಾತನಾಡಿದರು.

ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ, ಡಾ.ಶೈಲೇಂದ್ರ ಬೆಲ್ದಾಳೆ, ದೊಡ್ಡನಗೌಡ ಪಾಟೀಲ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ದಿಗಂಬರರಾವ್ ಮಾನಕರಿ, ತಾಲ್ಲೂಕು ಅಧ್ಯಕ್ಷ ವಿ.ಟಿ.ಶಿಂಧೆ, ಪ್ರಮುಖರಾದ ಅನಿಲ ಭೂಸಾರೆ, ಸೋಮನಾಥ ಬಿರಾದಾರ, ಜ್ಞಾನೇಶ್ವರ ಮುಳೆ, ಪ್ರದೀಪ ವಾತಡೆ, ದೀಪಕ ಗಾಯಕವಾಡ, ವೆಂಕಟೆಶ ಮಾಯಿಂದೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅನೇಕ ಜನರು ಪಾಲ್ಗೊಂಡಿದ್ದರು.

ಎಲ್ಲರಿಗೂ ಹೋಳಿಗೆ ಊಟ ಬಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.