ADVERTISEMENT

ಅವಿರೋಧ ಆಯ್ಕೆ ಪಂಚಾಯಿತಿಗೆ ₹50 ಸಾವಿರ

ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ವಸತಿ ಸಚಿವ ವಿ. ಸೋಮಣ್ಣ ಘೋಷಣೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:16 IST
Last Updated 2 ಡಿಸೆಂಬರ್ 2020, 2:16 IST
ಬೀದರ್ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ವಸತಿ ಸಚಿವ ವಿ. ಸೋಮಣ್ಣ ಸಸಿಗೆ ನೀರೆರೆದು ಉದ್ಘಾಟಿಸಿದರು. ಬಾಬುವಾಲಿ, ಡಾ. ಶೈಲೇಂದ್ರ ಬೆಲ್ದಾಳೆ, ಸೂರ್ಯಕಾಂತ ನಾಗಮಾರಪಳ್ಳಿ, ಪ್ರಭು ಚವಾಣ್, ಭಗವಂತ ಖೂಬಾ, ಶಿವಾನಂದ ಮಂಠಾಳಕರ್ ಇದ್ದರು
ಬೀದರ್ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ವಸತಿ ಸಚಿವ ವಿ. ಸೋಮಣ್ಣ ಸಸಿಗೆ ನೀರೆರೆದು ಉದ್ಘಾಟಿಸಿದರು. ಬಾಬುವಾಲಿ, ಡಾ. ಶೈಲೇಂದ್ರ ಬೆಲ್ದಾಳೆ, ಸೂರ್ಯಕಾಂತ ನಾಗಮಾರಪಳ್ಳಿ, ಪ್ರಭು ಚವಾಣ್, ಭಗವಂತ ಖೂಬಾ, ಶಿವಾನಂದ ಮಂಠಾಳಕರ್ ಇದ್ದರು   

ಜನವಾಡ: ಎಲ್ಲ ಸದಸ್ಯರು ಅವಿರೋಧ ಆಯ್ಕೆಯಾಗುವ ಗ್ರಾಮ ಪಂಚಾಯಿತಿ ಗಳಿಗೆ ಅಭಿವೃದ್ಧಿ ಕಾರ್ಯಗಳಿಗಾಗಿ ವೈಯಕ್ತಿಕವಾಗಿ ₹50 ಸಾವಿರ ಕೊಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಘೋಷಿಸಿದರು.

ಬೀದರ್ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸೋಮಣ್ಣ ಅವರ ಘೋಷಣೆ ನಂತರ ಎದ್ದು ನಿಂತ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ತಾವೂ ವೈಯಕ್ತಿಕವಾಗಿ ₹25 ಸಾವಿರ ನೀಡುವೆ ಎಂದು ಪ್ರಕಟಿಸಿದರು.

ADVERTISEMENT

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಬೇಕು. ಒಂದು ಸ್ಥಾನಕ್ಕೆ ಒಬ್ಬ ಸರ್ವ ಸಮ್ಮತ ಅಭ್ಯರ್ಥಿಯನ್ನು ಮಾತ್ರ ಕಣಕ್ಕೆ ಇಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಕುರಿತು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ಈ ಮೂಲಕ ಚುನಾವಣೆಯಲ್ಲಿ ಪಕ್ಷದ ವಿಜಯ ಪತಾಕೆ ಹಾರಿಸಬೇಕು’ ಎಂದು ಸೋಮಣ್ಣ ಹೇಳಿದರು.

‘ಸೂರ್ಯಕಾಂತ ನಾಗಮಾರಪಳ್ಳಿ ಹಾಗೂ ಡಾ. ಶೈಲೇಂದ್ರ ಬೆಲ್ದಾಳೆ ಮುಂದೆ ವಿಧಾನಸಭೆಗೆ ಆಯ್ಕೆಯಾಗಲಿದ್ದಾರೆ. ಬಿಜೆಪಿಯ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾದರೆ ಪ್ರಭು ಚವಾಣ್ ತಮ್ಮ ಕೈಗೆ ಸಿಗಲ್ಲ. ಅವರು ಸಿಎಂ, ಪಿಎಂ ಬಳಿಗೇ ಹೋಗುತ್ತಾರೆ’ ಎಂದರು.

‘ಭಗವಂತ ಖೂಬಾ ಅವರಿಗೆ ಒಳ್ಳೆಯ ಸ್ಥಾನಮಾನ ಸಿಗುವ ಸಂಭವ ಇವೆ. ಹಾಗಾದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ನೆರವಾಗಲಿದೆ’ ಎಂದು ತಿಳಿಸಿದರು.

ಅರ್ಹರಿಗೆ ಮನೆ ಕೊಡಿ: ‘ಸರ್ಕಾರದ ವಸತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಹೀಗಾಗಿ ಜಾತಿ, ಪಕ್ಷವನ್ನು ಗಣನೆಗೆ ತೆಗೆದುಕೊಳ್ಳದೆ ಅರ್ಹರಿಗೆ ಮನೆ ಮಂಜೂರು ಮಾಡಬೇಕು. ಬಿ.ನಾರಾಯಣರಾವ್ ಅವರ ಪಕ್ಷ ನೋಡದೆ ಬಸವಕಲ್ಯಾಣ ಕ್ಷೇತ್ರಕ್ಕೆ 7,500 ಮನೆಗಳನ್ನು ಮಂಜೂರು ಮಾಡಿದ್ದೆ’ ಎಂದು ಹೇಳಿದರು.

ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಮುಖಂಡರಾದ ಸತೀಶ್, ಈಶ್ವರಸಿಂಗ್ ಠಾಕೂರ್, ಗುರುನಾಥ ಜ್ಯಾಂತಿಕರ್, ಕುಶಾಲ್ ಪಾಟೀಲ ಗಾದಗಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣೆ, ಕಾರ್ಯದರ್ಶಿ ವಿಜಯಕುಮಾರ ಎಸ್.ಪಾಟೀಲ ಗಾದಗಿ, ರಾಜೇಂದ್ರ ಪೂಜಾರಿ, ಪ್ರಕಾಶ ಟೊಣ್ಣೆ, ಬಸವರಾಜ ಆರ್ಯ, ಸೋಮನಾಥ ಪಾಟೀಲ, ಹಣಮಂತ ಬುಳ್ಳಾ, ಜಗನ್ನಾಥ ಪಾಟೀಲ, ಬಸವರಾಜ ಜೋಜನಾ, ಮಹೇಶ ಪಾಲಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.