
ಬೀದರ್: ‘ಜಾತಿ ರಹಿತ, ಶೋಷಣೆ ರಹಿತ ಸಮಾಜ ನಿರ್ಮಿಸುವುದೇ ಲಿಂಗಾಯತ ಧರ್ಮದ ಉದ್ದೇಶ’ ಎಂದು ಉಪನ್ಯಾಸಕಿ ಗೀತಾ ಗಡ್ಡಿ ಹೇಳಿದರು.
ನಗರದ ರಾಂಪೂರೆ ಕಾಲೊನಿಯ ಬನಶಂಕರಿ ನಿಲಯದಲ್ಲಿ ಏರ್ಪಡಿಸಿದ್ದ ಮೇದಾರ ಕೇತಯ್ಯ ನವರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೌಢ್ಯವನ್ನು ತೊಲಗಿಸಿ, ವೈಜ್ಞಾನಿಕವಾದ ಲಿಂಗಾಯತ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದ್ದರು. ಬಸವಣ್ಣನವರು ಸಕಲ ಜೀವಿಗಳಿಗೆ ಲೇಸು ಬಯಸುವ ತತ್ವಗಳನ್ನು ಪ್ರತಿಪಾದಿಸಿದ್ದರು. ಎಲ್ಲಾ ರೀತಿಯ ಮೌಢ್ಯ, ಶೋಚಣೆ, ಕಂದಾಚಾರಕ್ಕೆ ಬಸವತತ್ವ ದಿವ್ಯೌಷಧಿ ಎಂದು ಹೇಳಿದರು.
ಸುವರ್ಣಾ ಚಿಮಕೋಡೆ ಮಾತನಾಡಿ, ಮೇದಾರ ಕೇತಯ್ಯನವರು ಬಿದರಿನಿಂದ ಬುಟ್ಟಿ ತಯಾರಿಸುವ ಕಾಯಕ ಮಾಡುತ್ತಿದ್ದರು. ಕೇತಯ್ಯನವರು 18 ವಚನಗಳನ್ನು ರಚಿಸಿದ್ದಾರೆ. ಅವರು ನಿತ್ಯ ಕಾಡಿಗೆ ಹೋಗಿ ಬಿದಿರು ತಂದು, ಬುಟ್ಟಿಗಳನ್ನು ತಯಾರಿಸುತ್ತಿದ್ದರು. ಅವರೊಬ್ಬ ಕಾಯಕ ಜೀವಿಯಾಗಿದ್ದರು ಎಂದರು.
ವಚನ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಉಮಾಕಾಂತ ಮೀಸೆ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಯುವಪೀಳಿಗೆಯಲ್ಲಿ ಬಸವತತ್ವದ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವುದು ಬಹಳ ಅಗತ್ಯ ಎಂದು ಹೇಳಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನೀತಾ ದಾಡಗೆ ಮಾತನಾಡಿ, ಅಂತರಂಗ, ಬಹಿರಂಗ ಶುದ್ಧೀಕರಣಕ್ಕಾಗಿ, ಮನಸ್ಸಿನ ಮಲಿನತೆ ನಿವಾರಿಸಲು ಬಸವತತ್ವ ಆಚರಣೆ ಅಗತ್ಯ ಎಂದರು.
ಗುರುದತ್ತ ಧ್ಯಾನ ಮಂದಿರದ ಸಂಚಾಲಕ ವೀರಶೆಟ್ಟಿ ಕಾಗಾ, ನಿರ್ದೇಶಕ ವಿಷ್ಣುಕಾಂತ ಇದ್ದರು. ರಾಂಪೂರೆ ಕಾಲೊನಿಯ ಅಕ್ಕನ ಬಳಗದವರಿಂದ ವಚನ ಸಂಗೀತ ನಡೆಯಿತು. ಸುರೇಖಾ ಬಾಬುರಾವ್ ಹುಲಸೂರೆ ಗುರುಬಸವ ಪೂಜೆ ನೆರವೇರಿಸಿದರು. ಸುರೇಖಾ ಹುಲಸೂರೆ ಸ್ವಾಗತಿಸಿದರೆ, ಬಸವರಾಜ ಮೂಲಗೆ ನಿರೂಪಿಸಿದರು. ಶ್ರೀನಿವಾಸ ಬಿರಾದಾರ ವಂದಿಸಿದರು. ಪ್ರಮುಖರಾದ ಅಶೋಕ ಬೂದಿಹಾಳ, ಕಲ್ಯಾಣರಾವ್ ಚಳಕಾಪೂರೆ, ಶೈಲಜಾ ಚಳಕಾಪೂರೆ, ಸಿದ್ರಾಮಪ್ಪ ಕಪಲಾಪೂರೆ ಹಾಜರಿದ್ದರು.