ಖಟಕಚಿಂಚೋಳಿ: ಸಮೀಪದ ಹಾಲಹಳ್ಳಿ (ಕೆ) ಗ್ರಾಮದ ರೈತ ಅಮೃತರಾವ್ ಪಾಟೀಲ ಅವರು ತಮ್ಮ ನರ್ಸರಿಯಲ್ಲಿ ವಿವಿಧ ತಳಿಯ ಕಬ್ಬಿನ ಸಸಿಗಳನ್ನು ಬೆಳೆಸುವ ಮೂಲಕ ಯಶಸ್ಸು ಕಾಣುತ್ತಿದ್ದಾರೆ.
ಅಮೃತರಾವ್ ಅವರು ತಮ್ಮ ಅರ್ಧ ಎಕರೆ ಪ್ರದೇಶದಲ್ಲಿ ವಿವಿಧ ತಳಿಯ ಕಬ್ಬಿನ ಸಸಿಗಳನ್ನು ಸಿದ್ಧಪಡಿಸುತ್ತಾರೆ. ತಮಗೆ ಬೇಕಾಗುವಷ್ಟು ಬಳಸಿಕೊಂಡು ಉಳಿದದ್ದನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಹಣ ಗಳಿಸುತ್ತಿದ್ದಾರೆ.
‘ಪ್ರತಿ ಎಕರೆಗೆ ಸರಾಸರಿ 2.5 ರಿಂದ 3 ಟನ್ ಕಬ್ಬಿನ ಬೀಜ ಬೇಕಾಗುತ್ತದೆ. ಅಂದರೆ ಕಬ್ಬಿನ ಕಣ್ಣಿನ ಸಮೇತ ಗಣಿಕೆಯನ್ನು ನಾಟಿ ಮಾಡುತ್ತಾರೆ. ಆದರೆ, ನರ್ಸರಿ ವಿಧಾನದಲ್ಲಿ ಕೇವಲ ಕಣ್ಣನ್ನು ಮಾತ್ರ ತೆಗೆದುಕೊಂಡು ಉಳಿದದ್ದನ್ನು ಸಕ್ಕರೆ ಕಾರ್ಖಾನೆ ಅಥವಾ ಬೆಲ್ಲ ತಯಾರಿಸಲು ಬಳಸಲಾಗುತ್ತದೆ’ ಎನ್ನುತ್ತಾರೆ ರೈತ .
ಯಂತ್ರದಿಂದ ಕಬ್ಬಿನ ಕಣ್ಣನ್ನು ಕತ್ತರಿಸಿ ಟ್ರೇನಲ್ಲಿ ಹಾಕಲಾಗುತ್ತದೆ. ನಂತರ ಪ್ರಾಕೃತಿಕ ಕೋಕೋ ಪಿಟ್, ಕ್ರೀಮಿನಾಶಕ, ಶೀಲಿಂಧ್ರನಾಶಕ ರಾಸಾಯನಿಕಗಳನ್ನು ಬಳಸಿ ಹದವಾದ ಮಣ್ಣಿನ ಮಾದರಿಯ ವಸ್ತುವನ್ನು ಸಿದ್ಧಪಡಿಸಲಾಗುತ್ತದೆ. ಇದನ್ನು ಪ್ಲಾಸ್ಟಿಕ್ ಟ್ರೇನಲ್ಲಿ ಹಾಕಿ ಕಬ್ಬಿನ ಕಣ್ಣನ್ನು ನೆನೆಹಾಕಲಾಗುತ್ತದೆ. ಏಳು ದಿನ ಇದರ ಮೇಲೆ ಪ್ಲಾಸ್ಟಿಕ್ ಹೊದಿಸಿ, ಗಾಳಿ ಆಡದಂತೆ ಇಡಲಾಗುತ್ತದೆ.
25 ರಿಂದ 30 ದಿನಗಳ ಬಳಿಕ ಸಸಿಗಳು 4–5 ಇಂಚು ಬೆಳೆದಿರುತ್ತವೆ. ನಂತರ ಇವುಗಳನ್ನು ನರ್ಸರಿಯಲ್ಲಿ ಆರೈಕೆ ಮಾಡಲಾಗುತ್ತದೆ. ಆ ಮೇಲೆ ಹೊಲದಲ್ಲಿ 5 *1.5 ಉದ್ದದ ಅಂತರದಲ್ಲಿ ನಾಟಿ ಮಾಡಲಾಗುತ್ತದೆ.
‘ನಮ್ಮ ನರ್ಸರಿಯಲ್ಲಿ ಸಿಒವಿಎಸ್ 8005 ಪ್ರತಿ ಸಸಿಗೆ ₹2.40, ಸಿಒವಿಎಸ್15121 ₹2.7, ಸಿಒವಿಎಸ್ 5012 ₹ 3.70 ನಂತೆ ಮಾರಾಟ ಮಾಡಲಾಗುತ್ತದೆ. ಪ್ರತಿ ಎಕರೆಗೆ 6 ಸಾವಿರ ಸಸಿ ಬೇಕಾಗುತ್ತವೆ’ ಎಂದು ರೈತ ಅಮೃತರಾವ್ ಪಾಟೀಲ ‘ಪ್ರಜಾವಾಣಿ’ ಗೆ ತಿಳಿಸಿದರು.
‘ನಮ್ಮ ಹೊಲದಲ್ಲಿ ನರ್ಸರಿ ಪ್ರಾರಂಭಿಸಿರುವುದರಿಂದ ಕಬ್ಬು ಕಟಾವು ಮಾಡುವರು, ಕಬ್ಬಿನ ಕಣ್ಣು ತೆಗೆಯುವವರು ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಪ್ರತಿದಿನ 30–35 ಜನ ಕೂಲಿಯಾಳುಗಳಿಗೆ ನಿರಂತರ ಕೆಲಸ ಕೊಟ್ಟಂತಾಗಿದೆ’ ಎಂದು ಅಮೃತರಾವ್ ಸಂತಸ ವ್ಯಕ್ತಪಡಿಸಿದರು.
‘ನರ್ಸರಿ ಮಾದರಿಯಲ್ಲಿ ಕಬ್ಬಿನ ಸಸಿ ಬೆಳೆಸುವವರಿಗೆ ಕೃಷಿ ಇಲಾಖೆಯಿಂದ ಮಾರ್ಗದರ್ಶನ ಮಾಡಲಾಗುತ್ತಿದೆ. ಶೇ 90ರಷ್ಟು ರಿಯಾಯಿತಿ ದರದಲ್ಲಿ ಹನಿ ನೀರಾವರಿ ಪರಿಕರಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಹೆಚ್ಚಿನ ರೈತರು ಇತ್ತೀಚಿನ ದಿನಗಳಲ್ಲಿ ನರ್ಸರಿಯಲ್ಲಿ ಕಬ್ಬು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ಬಸವಪ್ರಭು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.