ADVERTISEMENT

ಉದ್ಯೋಗ ಖಾತ್ರಿಯಲ್ಲಿ ಅರಳಿದ ಹೂದೋಟ: ಸೇಂಟ್ ಗುಲಾಬಿಯಿಂದ ಮಾಸಿಕ ₹ 36 ಸಾವಿರ ಆದಾಯ

ನಾಗೇಶ ಪ್ರಭಾ
Published 23 ಜೂನ್ 2025, 6:41 IST
Last Updated 23 ಜೂನ್ 2025, 6:41 IST
ಬೀದರ್ ತಾಲ್ಲೂಕಿನ ಚಿಟ್ಟಾ ಗ್ರಾಮದ ತೋಟದಲ್ಲಿ ಬೆಳೆದ ಕೆಂಪು ಸೇಂಟ್ ಗುಲಾಬಿಯೊಂದಿಗೆ ಸುಮನ್‍ಬಾಯಿ, ರೈತ ಮಾರುತಿ ವಾಘಮಾರೆ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸಚಿನ್ ಕೌಠಾ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಕಾಶಿನಾಥ ಸ್ವಾಮಿ ಹಾಗೂ ಶಿವಕುಮಾರ ಬಿರಾದಾರ
ಬೀದರ್ ತಾಲ್ಲೂಕಿನ ಚಿಟ್ಟಾ ಗ್ರಾಮದ ತೋಟದಲ್ಲಿ ಬೆಳೆದ ಕೆಂಪು ಸೇಂಟ್ ಗುಲಾಬಿಯೊಂದಿಗೆ ಸುಮನ್‍ಬಾಯಿ, ರೈತ ಮಾರುತಿ ವಾಘಮಾರೆ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸಚಿನ್ ಕೌಠಾ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಕಾಶಿನಾಥ ಸ್ವಾಮಿ ಹಾಗೂ ಶಿವಕುಮಾರ ಬಿರಾದಾರ   

ಚಿಟ್ಟಾ (ಜನವಾಡ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಿನಿಂದ ಬೀದರ್ ತಾಲ್ಲೂಕಿನ ಚಿಟ್ಟಾ ಗ್ರಾಮದ ರೈತ ಮಾರುತಿ ವಾಘಮಾರೆ ಅವರ ಹೊಲದಲ್ಲಿ ಹೂದೋಟ ಅರಳಿದೆ.

ತೋಟದೆಲ್ಲೆಡೆ ಈಗ ಸುವಾಸಿತ ‘ಸೇಂಟ್ ಗುಲಾಬಿ’ಗಳು ಕಣ್ಮನ ಸೆಳೆಯುತ್ತಿವೆ. ಅಷ್ಟು ಮಾತ್ರವಲ್ಲ; ರೈತನಿಗೆ ಕೈ ತುಂಬಾ ಕಾಸು ಕೂಡ ತಂದು ಕೊಡುತ್ತಿವೆ.

ಉದ್ಯೋಗ ಖಾತ್ರಿ ಯೋಜನೆ ಮಾರುತಿ ಅವರ ಪಾಲಿಗೆ ವರದಾನ ಆಗಿದೆ. ಯೋಜನೆಯಿಂದಾಗಿ ಅವರು ನಿತ್ಯ ಸರಾಸರಿ ₹ 1,200 ರಂತೆ ಮಾಸಿಕ ₹ 36 ಸಾವಿರ ಗಳಿಕೆ ಮಾಡುತ್ತಿದ್ದಾರೆ.

ADVERTISEMENT

ತೋಟಗಾರಿಕೆ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಬೆಳೆದ ಗುಲಾಬಿ ಗಿಡಗಳು ಅವರಿಗೆ ನಿರಂತರ ಆದಾಯದ ಮೂಲಗಳಾಗಿವೆ.

‘ನನ್ನ ಒಂದು ಎಕರೆ ಜಮೀನಿನಲ್ಲಿ ವರ್ಷದ ಹಿಂದೆ ತಮಿಳುನಾಡಿನಿಂದ ಕೆಂಪು ಸೇಂಟ್ ಗುಲಾಬಿ ಸಸಿಗಳನ್ನು ತಂದು ಬೆಳೆಸಿದ್ದೇನೆ. 2,000 ಸಸಿಗಳಲ್ಲಿ 1,600 ಸಸಿಗಳು ಬೆಳೆದಿದ್ದು, 10 ತಿಂಗಳಿಂದ ಹೂ ಕೊಡುತ್ತಿವೆ. ಸದ್ಯ ಹೂವಿನ ಮಾರಾಟದಿಂದ ಪ್ರತಿ ದಿನ ಸರಾಸರಿ ₹ 1,200 ಆದಾಯ ಪಡೆಯುತ್ತಿದ್ದೇನೆ’ ಎಂದು ಹೇಳುತ್ತಾರೆ ರೈತ ಮಾರುತಿ ವಾಘಮಾರೆ.

ಸಸಿಗಳು ಎರಡು ತಿಂಗಳಲ್ಲೇ ಹೂ ಕೊಡಲು ಆರಂಭಿಸಿದವು. ಪ್ರಾರಂಭದಲ್ಲಿ ಕಡಿಮೆ ಆದಾಯ ಬಂದಿತ್ತು. ಗಿಡಗಳು ದೊಡ್ಡವಾದಂತೆ ಇಳುವರಿ ಜತೆಗೆ ಆದಾಯವೂ ಹೆಚ್ಚಿತು. ಗೊಬ್ಬರ, ಔಷಧಿ ಸೇರಿದಂತೆ ನಿರ್ವಹಣೆ ಖರ್ಚು ಹೊರತುಪಡಿಸಿ ಈವರೆಗೆ ಪುಷ್ಪ ಮಾರಾಟದಿಂದ ₹ 1.20 ಲಕ್ಷ ಆದಾಯ ಬಂದಿದೆ’ ಎಂದು ತಿಳಿಸುತ್ತಾರೆ.

ನಿತ್ಯ ಸರಾಸರಿ 15 ಕೆ.ಜಿ. ಹೂವಿನ ಇಳುವರಿ ಬರುತ್ತಿದೆ. ಬೀದರ್ ಮಾರುಕಟ್ಟೆಯಲ್ಲಿ ಹೂ ಮಾರಾಟ ಮಾಡುತ್ತಿದ್ದು, ಕೆ.ಜಿ.ಗೆ ₹ 80 ಬೆಲೆ ಸಿಗುತ್ತಿದೆ ಎಂದು ಹೇಳುತ್ತಾರೆ.

ಹೂವಿನ ಸಸಿ ಖರೀದಿ, ತಗ್ಗು ತೋಡಿ ಸಸಿ ನೆಡುವಿಕೆ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ತೋಟಗಾರಿಕೆ ಇಲಾಖೆಯವರು ಉದ್ಯೋಗ ಖಾತ್ರಿ ಯೋಜನೆಯಡಿ ಸಹಾಯಧನ ಕಲ್ಪಿಸಿದ್ದಾರೆ ಎಂದು ತಿಳಿಸುತ್ತಾರೆ.

‘ಹೊಲದಲ್ಲಿ ಕೊಳವೆ ಬಾವಿ ಇದೆ. ಹನಿ ನೀರಾವರಿ ಪದ್ಧತಿ ಮೂಲಕ ಹೂವಿನ ಗಿಡಗಳಿಗೆ ನೀರುಣಿಸುತ್ತಿದ್ದೇನೆ. ಗಿಡಗಳಿಗೆ ನೀರು, ಗೊಬ್ಬರ ಕೊಟ್ಟು, ಔಷಧಿ ಸಿಂಪಡಿಸಿ ಚೆನ್ನಾಗಿ ನಿರ್ವಹಣೆ ಮಾಡಿದರೆ 10 ರಿಂದ 12 ವರ್ಷಗಳ ವರೆಗೆ ಹೂ ಕೊಡಲಿವೆ’ ಎಂದು ಹೇಳುತ್ತಾರೆ.

‘ನನಗೆ ಎರಡು ಎಕರೆ ಜಮೀನಿದೆ. ಒಂದು ಎಕರೆಯಲ್ಲಿ ಮಾವು, ಸಾಗವಾನಿ, ಶ್ರೀಗಂಧ, ಸಿಲ್ವರ್ ಓಕ್ ಗಿಡಗಳಿವೆ. ಉಳಿದ ಒಂದು ಎಕರೆಯಲ್ಲಿ ಖಾತ್ರಿ ಯೋಜನೆಯಡಿ ಗುಲಾಬಿ ಬೆಳೆದಿದ್ದೇನೆ’ ಎಂದು ತಿಳಿಸುತ್ತಾರೆ 73 ವರ್ಷದ ಮಾರುತಿ.

ತೋಟಗಾರಿಕೆ ಇಲಾಖೆಯ ಉದ್ಯೋಗ ಖಾತ್ರಿ ಯೋಜನೆಯಡಿ ಬೆಳೆದ ಸೇಂಟ್ ಗುಲಾಬಿ ನನಗೆ ನಿರೀಕ್ಷೆಗಿಂತ ಹೆಚ್ಚು ಆದಾಯ ಕೊಡುತ್ತಿದೆ.
ಮಾರುತಿ ವಾಘಮಾರೆ ರೈತ
ತೋಟಗಾರಿಕೆ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಹೂ ಮಾವು ಪಪ್ಪಾಯ ಬಾಳೆ ಬಹು ವಾರ್ಷಿಕ ಬೆಳೆ ಬೆಳೆಯಲು ಅವಕಾಶ ಇದೆ
ಸಚಿನ್ ಕೌಠಾ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ

ಹೂ ಬೆಳೆಯಲು ಅಧಿಕಾರಿಗಳ ಪ್ರೇರಣೆ

‘ಮೊದಲು ಹೊಲದಲ್ಲಿ ಹತ್ತಿ ಬೆಳೆಯುತ್ತಿದ್ದೆ. ಹೇಳಿಕೊಳ್ಳುವಂಥ ಆದಾಯ ಸಿಗುತ್ತಿರಲಿಲ್ಲ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಲಾಭದಾಯಕ ಪುಷ್ಪ ಕೃಷಿಯ ಬಗ್ಗೆ ಮಾರ್ಗದರ್ಶನ ಮಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಹೂ ಬೆಳೆಯಲು ಅವಕಾಶ ಇರುವ ಬಗ್ಗೆಯೂ ಮಾಹಿತಿ ನೀಡಿದರು. ಅದರಿಂದ ಹೂ ಕೃಷಿಗೆ ಪ್ರೇರಣೆ ದೊರೆಯಿತು’ ಎಂದು ತಿಳಿಸುತ್ತಾರೆ ರೈತ ಮಾರುತಿ ವಾಘಮಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.