ADVERTISEMENT

ನಕಲಿ ದಾಖಲೆ ಸೃಷ್ಟಿ: ಮುಖ್ಯಾಧಿಕಾರಿ ಸೇರಿ ಐವರ ವಿರುದ್ಧ ಪ್ರಕರಣ

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಬೇರೊಬ್ಬರ ಹೆಸರಿಗೆ ಪರಭಾರೆ ಮಾಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 13:30 IST
Last Updated 19 ಮಾರ್ಚ್ 2021, 13:30 IST
 ಶಂಭುಲಿಂಗ ದೇಸಾಯಿ
 ಶಂಭುಲಿಂಗ ದೇಸಾಯಿ   

ಹುಮನಾಬಾದ್: ನಕಲಿ ದಾಖಲೆ ಸೃಷ್ಟಿಸಿ ನಿವೇಶನವನ್ನು ಬೇರೊಬ್ಬರ ಹೆಸರಿಗೆ ಪರಭಾರೆ ಮಾಡಲು ಸಹಕರಿಸಿದ ಆರೋಪದ ಮೇಲೆ ಪುರಸಭೆ ಮುಖ್ಯಾಧಿಕಾರಿ ಸೇರಿ ಐವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವನಾಥ, ರೇಖಾ, ರೇಣುಕಾ, ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಿಬ್ಬಂದಿ ಶಿವಕುಮಾರ ವಿರುದ್ಧ ಪಟ್ಟಣದ ಟೀಚರ್ಸ್ ಕಾಲೊನಿಯ ಜಯಶ್ರೀ ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ‘ಡಿ’ ಗ್ರೂಪ್‌ ನೌಕರರ ಸಂಘ 1995 ರಲ್ಲಿ ದೂರುದಾರರ ಪತಿ ಸುಕೇಶಕುಮಾರ ಅವರಿಗೆ ಪಟ್ಟಣದ ಸರ್ವೆ ನಂ. 136/ಕೆ ಯಲ್ಲಿ 30x40 ನಿವೇಶನ ಹಂಚಿಕೆ ಮಾಡಿತ್ತು.

ADVERTISEMENT

‘28 ಫೆಬ್ರುವರಿ 2019 ರಂದು ನನ್ನ ಪತಿ ಮೃತಪಟ್ಟಿದ್ದಾರೆ. ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಲಿ ನಿವೇಶನವನ್ನು 2019 ರಲ್ಲಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಹಕಾರ ನೀಡುವ ಮೂಲಕ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವಂಚನೆ ಮಾಡಿದ್ದಾರೆ’ ಎಂದು ಜಯಶ್ರೀ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ನ್ಯಾಯಾಲಯದ ಆದೇಶದಂತೆ ಐವರ ವಿರುದ್ಧ ಹುಮನಾಬಾದ್ ಠಾಣೆಯಲ್ಲಿ ಪಿಎಸ್‍ಐ ರವಿಕುಮಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.