ಬಸವಕಲ್ಯಾಣ(ಬೀದರ್ ಜಿಲ್ಲೆ): ಪಕ್ಕದ ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಬೀದರ್ ತಾಲ್ಲೂಕಿನ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿದ್ದು ಉಮರ್ಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮುರುಮ್ ಠಾಣಾ ವ್ಯಾಪ್ತಿಯ ದಾಳಿಂಬ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಿಂದ ಅಪಘಾತವಾಗಿದೆ. ಬೀದರ್ ತಾಲ್ಲೂಕಿನ ಕಾಶೆಂಪುರ್ (ಪಿ) ಗ್ರಾಮದವರಾದ ಕಾರು ಚಾಲಕ ರತಿಕಾಂತ ಮಾರುತಿ ಬಸಗೊಂಡ (30), ಸದಾನಂದ ಮಾರುತಿ ಬಸಗೊಂಡ, (19) ಶಿವಕುಮಾರ ಚಿದಾನಂದ ವಗ್ಗೆ (26), ಸಂತೋಷ ಬಜರಂಗ ಬಸಗೊಂಡ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದೇ ಕಾರಿನಲ್ಲಿದ್ದ ದಿಗಂಬರ ಸಂಗೋಳಗೆ ಗಾಯಗೊಂಡಿದ್ದಾರೆ. ಇನ್ನೊಂದು ಕಾರಿನ ಚಾಲಕ ಸೊಲ್ಲಾಪುರದವನಾದ ಲಾವಣ್ಯ ಮಸೋನಿ ಈತನಿಗೂ ಗಾಯವಾಗಿದೆ.
ಮೃತರು ವಿಜಯಪುರ ಹತ್ತಿರದ ಪ್ರಸಿದ್ಧ ದೇವಸ್ಥಾನ ಹುಲಜಂತಿಯ ಮಾಳಿಂಗರಾಯನ ಜಾತ್ರೆಗೆ ಹೋಗಿ ಬರುವಾಗ ಬೆಳಿಗ್ಗೆ 6 ಗಂಟೆಗೆ ಅಪಘಾತ ಸಂಭವಿಸಿದೆ. ಉಮರ್ಗಾದಿಂದ ಸೊಲ್ಲಾಪುರ ಕಡೆಗೆ ಹೋಗುತ್ತಿದ್ದ ಇನ್ನೊಂದು ಕಾರು ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಎರಡೂ ಕಾರುಗಳು ನುಜ್ಜುಗುಜ್ಜಾಗಿದ್ದು ಒಳಗಿನವರನ್ನು ಜೆಸಿಬಿ ವಾಹನದಿಂದ ಹೊರಗೆ ತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸದಾಶಿವ ಸೇಲಾರ್, ಮುರುಮ್ ಠಾಣೆ ಅಧಿಕಾರಿಗಳಾದ ಸಂದೀಪ ದಹಿಫಳೆ ಮತ್ತಿತರರು ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.