ಮೃತರ ಅಂತಿಮ ದರ್ಶನಕ್ಕೆ ಬೀದರ್‌ನ ಲಾಡಗೇರಿಯಲ್ಲಿ ಸೋಮವಾರ ಅಪಾರ ಜನ ಸೇರಿದ್ದರು
ಬೀದರ್: ಕುಂಭಮೇಳಕ್ಕೆ ತೆರಳುವಾಗ ಅಪಘಾತದಲ್ಲಿ ಮೃತಪಟ್ಟ ಆರು ಜನರ ಮೃತದೇಹಗಳನ್ನು ಸೋಮವಾರ ನಗರಕ್ಕೆ ತರಲಾಯಿತು.
ಉತ್ತರ ಪ್ರದೇಶದ ಬನಾರಸ್ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಮೂರು ಆಂಬುಲೆನ್ಸ್‌ಗಳಲ್ಲಿ ನಗರದ ಲಾಡಗೇರಿಗೆ ಮಧ್ಯಾಹ್ನ ಮೃತದೇಹಗಳನ್ನು ತರಲಾಯಿತು. ಮೃತದೇಹ ಬರುವ ವಿಷಯ ಮೊದಲೇ ತಿಳಿದಿದ್ದ ಮೃತರ ಸಂಬಂಧಿಕರು ವಿವಿಧ ಭಾಗಗಳಿಂದ ಲಾಡಗೇರಿಗೆ ಬಂದಿದ್ದರು. ಆಂಬುಲೆನ್ಸ್‌ಗಳು ಬಡಾವಣೆಗೆ ಬರುತ್ತಿದ್ದಂತೆ ಸಂಬಂಧಿಕರ ದುಃಖದ ಕಟ್ಟೆ ಒಡೆದು, ಕಣ್ಣೀರ ಕೋಡಿ ಹರಿಯಿತು. ಆಕ್ರಂದನ ಮುಗಿಲು ಮುಟ್ಟಿತ್ತು. ಬಡಾವಣೆಯ ನಿವಾಸಿಗಳು ಮನೆಯ ಮಹಡಿಗಳ ಮೇಲೆ ನಿಂತು ಮೃತಶರೀರಗಳನ್ನು ವೀಕ್ಷಿಸಿದರು. ‘ಅಯ್ಯೋ ಹೀಗಾಗಬಾರದಿತ್ತು. ದೇವರು ಬಹಳ ಅನ್ಯಾಯ ಮಾಡಿದ’ ಎಂದು ಪರಸ್ಪರ ಮಾತನಾಡುತ್ತಿದ್ದರು. ಲಾಡಗೇರಿ ದೇವಸ್ಥಾನದ ಬಳಿಕ ಕೆಲಕಾಲ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ನಂತರ ನೇರವಾಗಿ ಮನ್ನಳ್ಳಿ ರಸ್ತೆಯಲ್ಲಿರುವ ಬಿ.ವಿ. ಭೂಮರಡ್ಡಿ ಕಾಲೇಜು ಎದುರಿನ ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಂತೋಷಕುಮಾರ (45), ಇವರ ಪತ್ನಿ ಸುನೀತಾ (40) ಅವರನ್ನು ಒಂದು ಕಡೆ, ಇವರ ಅತ್ತೆ ನೀಲಮ್ಮ (62), ಲಕ್ಷ್ಮಿ (57), ಸುಲೋಚನಾ ಚಂದ್ರಕಾಂತ (38) ಅವರ ಮೃತದೇಹಗಳನ್ನು ಇರಿಸಿ, ದಹನ ಮಾಡಿದರು. ಕಲಾವತಿ (40) ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಔರಾದ್‌ನ ಹೊಲದಲ್ಲಿ ನೆರವೇರಿಸಲಾಯಿತು.
ಘಟನೆಯಲ್ಲಿ ಗಾಯಗೊಂಡ ಏಳು ಜನರಿಗೆ ನಗರದ ಬ್ರಿಮ್ಸ್‌ಗೆ ತಂದು, ಚಿಕಿತ್ಸೆ ಮುಂದುವರೆಸಲಾಗಿದೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ ಮತ್ತಿತರರು ಹಾಜರಿದ್ದರು.
ಬೀದರ್‌ನ ಲಾಡಗೇರಿಯಿಂದ ಫೆ. 18ರಂದು ಪಯಣ ಬೆಳೆಸಿದ್ದ ಲಾಡಗೇರಿಯ 14 ಜನ ಕಾಶಿಯಲ್ಲಿ ವಿಶ್ವನಾಥನ ದರ್ಶನ ಪಡೆದು, ಫೆ. 21ರಂದು ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ತೆರಳುವಾಗ ವಾರಾಣಸಿ ಸಮೀಪ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಐದು ಜನ ಮೃತಪಟ್ಟಿದ್ದರು. ಇನ್ನೊಬ್ಬರು ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. 8 ಜನ ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕ ನಿಖಿಲ್ ಪರಾರಿಯಾಗಿದ್ದ.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬೀದರ್‌ನ ಬ್ರಿಮ್ಸ್‌ಗೆ ಸೋಮವಾರ ಭೇಟಿ ಕೊಟ್ಟು, ಗಾಯಾಳುಗಳ ಆರೋಗ್ಯ ವಿಚಾರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.