ADVERTISEMENT

ಯುವ ಮತದಾರರ ಹೆಸರು ಸೇರಿಸಿ

ಜಿಲ್ಲಾ ಚುನಾವಣಾ ಪಟ್ಟಿ ವೀಕ್ಷಕ ವಿನ್ಸೆಂಟ್ ಡಿಸೋಜಾ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 15:09 IST
Last Updated 5 ಡಿಸೆಂಬರ್ 2020, 15:09 IST
ಬೀದರ್‌ನಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಚುನಾವಣಾ ಪಟ್ಟಿ ವೀಕ್ಷಕ ವಿನ್ಸೆಂಟ್ ಡಿಸೋಜಾ ಮಾತನಾಡಿದರು
ಬೀದರ್‌ನಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಚುನಾವಣಾ ಪಟ್ಟಿ ವೀಕ್ಷಕ ವಿನ್ಸೆಂಟ್ ಡಿಸೋಜಾ ಮಾತನಾಡಿದರು   

ಬೀದರ್‌: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಚುನಾವಣಾ ಪಟ್ಟಿ ವೀಕ್ಷಕ ವಿನ್ಸೆಂಟ್ ಡಿಸೋಜಾ ಶನಿವಾರ ಜಿಲ್ಲೆಯ ಎಲ್ಲ ತಹಶೀಲ್ದಾರರೊಂದಿಗೆ ವಿಡಿಯೊ ಸಂವಾದದ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆಯ ಮಾಹಿತಿ ಪಡೆದರು.

ಮತದಾರರ ಪಟ್ಟಿಯಲ್ಲಿ ಹೊಸ ಹೆಸರುಗಳ ಸೇರ್ಪಡೆ, ತಿದ್ದುಪಡಿ, ಬದಲಾವಣೆ ಕುರಿತಂತೆ ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಗ್ರಾಮಗಳಲ್ಲಿ ಬಿಎಲ್‌ಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಕುರಿತಂತೆ ತಿಳಿವಳಿಕೆ ನೀಡಬೇಕು. ಮತದಾನಕ್ಕೆ ಅರ್ಹರಾಗಿರುವ ಯಾರೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಯಾವುದೇ ರೀತಿಯ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಜಿಲ್ಲೆಯಾದ್ಯಂತ ಅತ್ಯಂತ ಚುರುಕಿನಿಂದ ನಡೆಯಬೇಕು. ಈ ವಿಷಯದಲ್ಲಿ ಲೋಪಗಳಾದಲ್ಲಿ ಸಂಬಂಧಿಸಿದ ತಹಶೀಲ್ದಾರರನ್ನು ಹೊಣೆಗಾರರಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗ್ವಾರ್, ಬೀದರ್‌ ಹಾಗೂ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಗರೀಮಾ ಪನ್ವಾರ್, ಭುವನ್ ಪಾಟೀಲ್, ತಹಶೀಲ್ದಾರರು, ಮಾಸ್ಟರ್‌ ಟ್ರೇನರ್ ಡಾ.ಗೌತಮ ಅರಳಿ ಇದ್ದರು.

ರಾಜಕೀಯ ಮುಖಂಡರ ಸಭೆ:

ಜಿಲ್ಲಾ ಚುನಾವಣಾ ಪಟ್ಟಿ ವೀಕ್ಷಕ ವಿನ್ಸೆಂಟ್ ಡಿಸೋಜಾ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಪ್ರತಿನಿಧಿಗಳ ಸಭೆ ನಡೆಯಿತು.

ರಾಜಕೀಯ ಪಕ್ಷಗಳ ಮುಖಂಡರು ಬೂತ್ ಮಟ್ಟದ ಏಜೆಂಟ್‍ರನ್ನು ಮುಂಚಿತವಾಗಿ ನೇಮಿಸಿ, ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಡಿಸೋಜಾ ತಿಳಿಸಿದರು.

ಜಿಲ್ಲಾಧಿಕಾರಿ ರಾಮಚಂದ್ರನ್.ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗ್ವಾರ್, ಬೀದರ್‌ ಹಾಗೂ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಗರೀಮಾ ಪನ್ವಾರ್, ಭುವನ್ ಪಾಟೀಲ್ ವಿವಿಧ ಪಕ್ಷಗಳ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರತಿನಿಧಿಗಳು ಹಾಜರಿದ್ದರು.

ಮತದಾರರ ಪಟ್ಟಿ ಪರಿಷ್ಕರಣೆ: ಸಹಾಯವಾಣಿ

ಬೀದರ್‌: ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಹಶೀಲ್ದಾರ್‌ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.

ವಿವರ ಇಂತಿವೆ: ಬೀದರ್ ಜಿಲ್ಲಾಧಿಕಾರಿ ಕಚೇರಿ:08482-229688, ಬಸವಕಲ್ಯಾಣ ತಹಶೀಲ್ದಾರ್‌ ಕಚೇರಿ:08481-250338, ಮೊಬೈಲ್ ಸಂಖ್ಯೆ:9663963839, ಹುಮನಾಬಾದ್ ತಹಶೀಲ್ದಾರ್‌ ಕಚೇರಿ 08483-270051, ಮೊಬೈಲ್ ಸಂಖ್ಯೆ: 9164171007, ಬೀದರ್ ತಹಶೀಲ್ದಾರ್‌ ಕಚೇರಿ(ಬೀದರ್‌ ದಕ್ಷಿಣ) 08482-226459, ಮೊಬೈಲ್ ಸಂಖ್ಯೆ:8867665484, ಬೀದರ್ ತಹಶೀಲ್ದಾರ್‌ ಕಚೇರಿ (ಬೀದರ್ ಉತ್ತರ) 08482-226459, ಮೊಬೈಲ್ ಸಂಖ್ಯೆ:9916734776, ಭಾಲ್ಕಿ ತಹಶೀಲ್ದಾರ್‌ ಕಚೇರಿ 08484-262218, ಮೊಬೈಲ್ ಸಂಖ್ಯೆ:9164932279, ಔರಾದ್ ತಹಶೀಲ್ದಾರ್‌ ಕಚೇರಿ:08485-280024, ಮೊಬೈಲ್ ಸಂಖ್ಯೆ:9448205670.

ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಹೀಗೆ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ಯಾವುದೇ ರೀತಿಯ ಮಾಹಿತಿ ಪಡೆಯಲು ಮತ್ತು ಗೊಂದಲಗಳನ್ನು ನಿವಾರಿಸಿಕೊಳ್ಳಲು ಸಂಬಂಧಪಟ್ಟ ತಹಶೀಲ್ದಾರ್‌ ಕಚೇರಿಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರಗಳಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.