ಬೀದರ್: ಭಾರಿ ಮಳೆಯಿಂದ ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದ 4 ಜಿಲ್ಲೆಗಳ ಲಕ್ಷಾಂತರ ಎಕರೆ ಭೂಮಿಯಲ್ಲಿ ಸಂಭವಿಸಿರುವ ಬೆಳೆ ಹಾನಿಗೆ ಎನ್.ಡಿ.ಆರ್.ಎಫ್. ಎಸ್.ಡಿ.ಆರ್.ಎಫ್. ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿಯಾಗಿ ₹8500 ಘೋಷಿಸಿರುವ ಮುಖ್ಯಮಂತ್ರಿಗಳ ನಿರ್ಧಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸ್ವಾಗತಿಸಿದ್ದಾರೆ.
ನಮ್ಮ ಭಾಗದ ಸಚಿವರ, ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಮಂಗಳವಾರ ಬೀದರ್ ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದ ರೈತ ಪರ ಕಾಳಜಿಯ ಮುಖ್ಯಮಂತ್ರಿಗಳು, ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚುವರಿಯಾಗಿ 8500 ರೂ. ಘೋಷಿಸಿದ್ದಾರೆ ಎಂದು ಮಂಗಳವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್.ಡಿ.ಆರ್.ಎಫ್. ನಿಯಮಗಳಂತೆ ಖುಷ್ಕಿ, ನೀರಾವರಿ ಜಮೀನು ಹಾಗೂ ಬಹು ಬೆಳೆ ಹಾನಿಗೆ ಕ್ರಮವಾಗಿ ಪ್ರತಿ ಹೆಕ್ಟೇರ್ ಗೆ ₹8,500, ₹17,000 ಹಾಗೂ ₹25,500 ಪರಿಹಾರ ಇದೆ. ಇದರ ಜೊತೆಗೆ ಮುಖ್ಯಮಂತ್ರಿಯವರು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ ಗೆ ₹8,500 ಘೋಷಿಸಿ ರೈತರ ನೆರವಿಗೆ ನಿಂತಿದ್ದಾರೆ. ಇದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಬೆಳೆ ಹಾನಿಯ ಜೊತೆಗೆ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡಲಾಗುತ್ತಿದ್ದು, ಮೂಲಸೌಕರ್ಯ ಮರು ನಿರ್ಮಾಣ, ದುರಸ್ತಿಗೂ ರಾಜ್ಯ ಸರ್ಕಾರ ಕ್ರಮ ವಹಿಸಲಿದೆ, ಮಹಾ ಮಳೆಯಿಂದ ತೀವ್ರ ಬಾಧಿತವಾಗಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ಕೂಡ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸುವುದಾಗಿ ಹೇಳಿದ್ದಾರೆ.
ಮಹಾರಾಷ್ಟ್ರದಿಂದ ಮಾಂಜ್ರಾ ನದಿಗೆ ನೀರು ಬಿಟ್ಟಿರುವ ಕಾರಣ ಬೀದರ್ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಜಮೀನುಗಳು ಜಲಾವೃತವಾಗಿದ್ದು, ಮಣ್ಣು ಕೊಚ್ಚಿಹೋಗಿದೆ. ಇದರಿಂದ ಭೂಮಿ ಸತ್ವವೇ ಕಳೆದುಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಹೆಚ್ಚಿನ ಪರಿಹಾರ ಘೋಷಿಸಬೇಕು ಎಂದು ತಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಇದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿ ಹೆಚ್ಚಿನ ಪರಿಹಾರ ಘೋಷಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ರೈತರಪರ ಸರ್ಕಾರವಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸಂಕಷ್ಟದಲ್ಲಿರುವ ರೈತರೊಂದಿಗೆ ಸರ್ಕಾರ ಮತ್ತು ತಾವು ನಿಲ್ಲುವುದಾಗಿಯೂ ಈಶ್ವರ ಖಂಡ್ರೆ ಆಶ್ವಾಸನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.