ಭಾಲ್ಕಿ: ‘ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅ.2ರವರೆಗೆ ಸ್ವಚ್ಛತಾ ಹೀ ಸೇವಾ ಅಭಿಯಾನ ಆಯೋಜಿಸಲಾಗಿದೆ. ಸ್ವಯಂ ಪ್ರೇರಣೆ, ಸಾಮೂಹಿಕ ಶ್ರಮದಿಂದ ಮಾತ್ರ ನಾವು ನಮ್ಮ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಬಹುದು’ ಎಂದು ಜಿ.ಪಂ ಸಿಇಒ ಡಾ.ಗಿರೀಶ ಬದೋಲೆ ಹೇಳಿದರು.
ತಾಲ್ಲೂಕಿನ ಮಳಚಾಪುರ ಗ್ರಾ.ಪಂ ವ್ಯಾಪ್ತಿಯ ಮೈಲಾರ ಗ್ರಾಮದ ಮಲ್ಲಣ್ಣ ದೇವಸ್ಥಾನದ ಆವರಣದಲ್ಲಿ ಗುರುವಾರ ಸ್ವಚ್ಛತಾ ಹೀ ಸೇವಾ ಅಭಿಯಾನ ನಿಮಿತ್ತ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಗ್ರಾಮಗಳನ್ನು ಕಸಮುಕ್ತ ಮಾಡುವ ಗುರಿಯೊಂದಿಗೆ ಕಸ ಸಂಗ್ರಹಣೆ, ವಿಲೇವಾರಿ ಮತ್ತು ಸ್ವಚ್ಛತಾ ಶ್ರಮದಾನ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದ್ದು, ಅಭಿಯಾನದ ಕಾಲಾವಧಿ ಪ್ರಕಾರ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಕೈಗೊಂಡಿರುವ ಬಗ್ಗೆ ವಿವರಗಳನ್ನು ಸ್ವಚ್ಛತಾ ಸೇವಾ ಪೋರ್ಟಲ್‌ನಲ್ಲಿ ದಾಖಲಿಸಬೇಕು’ ಎಂದು ಹೇಳಿದರು.
ದೇವಸ್ಥಾನದ ಮುಂಭಾಗ, ದಾಸೋಹ ಸ್ಥಳ, ಪವಿತ್ರ ಸ್ನಾನ ಕುಂಡ, ದೇವಸ್ಥಾನದ ಮುಖ್ಯ ರಸ್ತೆ ಇತ್ಯಾದಿ ಸ್ಥಳಗಳಲ್ಲಿ ಶ್ರಮದಾನ ಕೈಗೊಳ್ಳಲಾಯಿತು. ತಾ.ಪಂ. ಇಒ ಸೂರ್ಯಕಾಂತ ಬಿರಾದಾರ, ತಾ.ಪಂ. ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಮಳಚಾಪುರ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಪಾಟೀಲ, ಅಭಿವದ್ಧಿ ಅಧಿಕಾರಿ ಮುನೀರ್ ಸೇರಿದಂತೆ ಹಲವರು ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.