ADVERTISEMENT

ಬೀದರ್‌: ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ಮಾಡಿದ ಅಸಾದುದ್ದೀನ್ ಒವೈಸಿ

ದೇಶ ದ್ರೋಹದ ಆರೋಪದಡಿ ಮಹಿಳೆಯರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 10:01 IST
Last Updated 2 ಫೆಬ್ರುವರಿ 2020, 10:01 IST
ಬೀದರ್‌ನಲ್ಲಿ ಶನಿವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು
ಬೀದರ್‌ನಲ್ಲಿ ಶನಿವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು   

ಬೀದರ್‌: ಶಾಹೀನ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಮಾಡಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಪ್ರಯುಕ್ತ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರು ಶನಿವಾರ ಇಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

‘ಶಾಲೆಯಲ್ಲಿ ಮಕ್ಕಳಿಂದ ನಾಟಕ ಮಾಡಿಸುವುದೇ ತಪ್ಪೇ, ಎಳೆಯ ಮಕ್ಕಳು ನಾಟಕ ಮಾಡಿದ್ದಕ್ಕೆ ವಿಧವೆಯನ್ನು ಜೈಲಿಗಟ್ಟಿರುವುದು ಸರಿಯಾದ ಕ್ರಮವಲ್ಲ. ಇದೇ ನೆಲದಲ್ಲಿ ವಾಸವಾಗಿರುವ ಮಹಿಳೆ ದೇಶದ್ರೋಹದ ಕೆಲಸವನ್ನು ಹೇಗೆ ಮಾಡಲು ಸಾಧ್ಯ?, ಮುಖ್ಯ ಶಿಕ್ಷಕಿ ಹಾಗೂ ಪಾಲಕಿಯ ವಿರುದ್ಧ ದಾಖಲಿಸಿರುವ ದೇಶದ್ರೋಹದ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ನಿಮ್ಮ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ಹೊಸ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಪ್ರಕರಣದ ಸರಿಯಾದ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಒವೈಸಿ ಅವರ ಮನವಿಯನ್ನು ಸಂಯಮದಿಂದ ಆಲಿಸಿದ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರು, ‘ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಉತ್ತರಿಸಿದರು.

ನಂತರ ಒವೈಸಿ, ಪೊಲೀಸ್‌ ಮುಖ್ಯಾಲಯದಿಂದ ನೇರವಾಗಿ ಬೀದರ್‌ ಕಾರಾಗೃಹಕ್ಕೆ ತೆರಳಿದರು. ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಮಾಡಿದ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ತಾಯಿ ನಜಮುನ್ನಿಸಾ (ಅನುಜಾ ಮಿನ್ಸಾ) ಅವರನ್ನೂ ಭೇಟಿಯಾದರು. ಜೈಲು ಅಧಿಕಾರಿಗಳು ಒವೈಸಿ ಅವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದರು.

ಅಸಾದುದ್ದೀನ್‌ ಒವೈಸಿ ಅವರನ್ನು ನೋಡುತ್ತಿದ್ದಂತೆಯೇ ನಜಮುನ್ನಿಸಾ ಗೋಳಾಡಿ ಅತ್ತರು. ‘ನಾನೊಬ್ಬಳು ವಿಧವೆ. ಮನೆಯಲ್ಲಿ ಒಬ್ಬಳೇ ಮಗಳು ಇದ್ದಾಳೆ. ಅವಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಎರಡು ದಿನ ಜೈಲಿನಲ್ಲಿದ್ದರೂ ಯಾರೊಬ್ಬರೂ ನನ್ನನ್ನು ಭೇಟಿಯಾಗಲು ಬಂದಿಲ್ಲ’ ಎಂದು ಕಣ್ಣೀರು ಹಾಕಿದರು ಎನ್ನಲಾಗಿದೆ.

‘ನಮ್ಮ ಪಕ್ಷ ನಿಮ್ಮ ನೆರವಿಗೆ ಬರಲಿದೆ. ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದರೂ ಅದರ ವೆಚ್ಚವನ್ನು ನಾನೇ ನೋಡಿಕೊಳ್ಳುವೆ’ ಎಂದು ಹೇಳಿದರೆಂದು ತಿಳಿದು ಬಂದಿದೆ.

ತೆಲಂಗಾಣದ ಎಐಎಂಐಎಂ ಶಾಸಕ ಕೌಸರ್ ಮೊಹಿದ್ದೀನ್, ಬೀದರ್‌ ನಗರಸಭೆ ಮಾಜಿ ಸದಸ್ಯ ಅಜೀಜ್‌ಸಾಬ ಯಾಮಿನ್‌ ಖಾನ್, ಸಯ್ಯದ್‌ ಮನ್ಸೂರ್‌ ಖಾದ್ರಿ ಇದ್ದರು.

ಜಿಲ್ಲೆಯ ಪೊಲೀಸರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಬೀದರ್‌ಗೆ ಭೇಟಿ ನೀಡುವ ಮಾಹಿತಿ ಇರಲಿಲ್ಲ. ಮಧ್ಯಾಹ್ನ ವಾಹನದಲ್ಲಿ ನೇರವಾಗಿ ಬೀದರ್‌ಗೆ ಬಂದು ಪೊಲೀಸರು ಹಾಗೂ ಬಂಧನಕ್ಕೊಳಗಾದ ಮಹಿಳೆಯರನ್ನು ಭೇಟಿಯಾಗಿ ನಂತರ ಹುಮನಾಬಾದ್‌ ಮಾರ್ಗವಾಗಿ ಹೈದರಾಬಾದ್‌ಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.