ADVERTISEMENT

ಬೀದರ್‌ನಿಂದ ಶೀಘ್ರ ವಿಮಾನಯಾನ ಸೇವೆ ಆರಂಭ: ಕೇಂದ್ರ ಸಚಿವ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 4:49 IST
Last Updated 19 ಫೆಬ್ರುವರಿ 2024, 4:49 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ಬೀದರ್‌ ವಿಮಾನ ನಿಲ್ದಾಣದಿಂದ ಶೀಘ್ರದಲ್ಲಿ ವಿಮಾನಯಾನ ಸೇವೆ ಆರಂಭಿಸಲಾಗುವುದು’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

‘ಒಪ್ಪಂದ ಕೊನೆಗೊಂಡ ಕಾರಣ ಇತ್ತೀಚೆಗೆ ವಿಮಾನಯಾನ ಸೇವೆ ನಿಂತು ಹೋಗಿದೆ. ಸೇವೆ ಆರಂಭಿಸಲು ನಾಗರಿಕ ವಿಮಾನಯಾನ ಖಾತೆ ಸಚಿವರು ಹಾಗೂ ಕಂಪನಿಯವರೊಂದಿಗೆ ಮಾತುಕತೆ ನಡೆದಿದೆ’ ಎಂದು ಭಾನುವಾರ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

‘ಬೀದರ್ ವಿಮಾನಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಯಾವುದೇ ಕೊಡುಗೆ ಕೊಟ್ಟಿಲ್ಲ. ಈ ಹಿಂದೆಯೂ ಅವರು ಮಂತ್ರಿಯಿದ್ದಾಗ ಸಹಕಾರ ನೀಡಿರಲಿಲ್ಲ. ನಾನು ತಂದಿರುವ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಂದ ಅನುಕೂಲ ಪಡೆದು, ಅವುಗಳನ್ನು ನಾನೇ ಮಾಡಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುವುದು ಖಂಡ್ರೆಯವರ ಕಾಯಕವಾಗಿದೆ’ ಎಂದು ಟೀಕಿಸಿದ್ದಾರೆ. 

ADVERTISEMENT

‘ಖಂಡ್ರೆಯವರಿಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನನ್ನ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. ಅವರಿಗೆ ಯೋಗ್ಯತೆ ಇಲ್ಲ ಎನ್ನುವುದು ಎತ್ತಿ ತೋರಿಸುತ್ತದೆ’ ಎಂದಿದ್ದಾರೆ. 

‘60 ವರ್ಷಗಳಿಂದ ಬೀದರ್ ಜಿಲ್ಲೆಯಲ್ಲಿ ಖಂಡ್ರೆ ಪರಿವಾರದವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಒಬ್ಬರಾದ ನಂತರ ಒಬ್ಬರು ಅಧಿಕಾರಕ್ಕೆ ಬರುತ್ತಿದ್ದಾರೆ. ಜಿಲ್ಲೆಯ ಜನರಿಗೆ ಹೆದರಿಸಿ, ಬೆದರಿಸಿ ಅಧಿಕಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.