
ಔರಾದ್: ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿ ಬರುವ ಇಲ್ಲಿಯ ಇತಿಹಾಸ ಪ್ರಸಿದ್ಧ ಅಮರೇಶ್ವರ ದೇವಸ್ಥಾನದ ಮಹಾದ್ವಾರ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಅನುಮತಿ ಸಿಗದೆ ಅಡ್ಡಿ ಎದುರಾಗಿದೆ.
ದೇವಸ್ಥಾನ ಮಹಾದ್ವಾರ ಸಿಥಿಲಾವಸ್ಥೆಗೆ ತಲುಪಿದ್ದು, ಅದನ್ನು ತೆರವುಗೊಳಿಸಿ ಹೊಸದಾಗಿ ಮಹಾದ್ವಾರ ನಿರ್ಮಾಣ ಮಾಡುವಂತೆ ಸ್ಥಳೀಯ ಭಕ್ತರು ಬೇಡಿಕೆ ಮಂಡಿಸಿದ್ದಾರೆ.
‘ಭಕ್ತರು ದೇಣಿಗೆ ನೀಡಿದ ₹1.50 ಕೋಟಿಯಷ್ಟು ಹಣ ದೇವಸ್ಥಾನದ ಖಾತೆಯಲ್ಲಿ ಇದೆ. ಅಲ್ಲದೆ ಪ್ರತಿ ವರ್ಷ ₹10 ರಿಂದ 15 ಲಕ್ಷ ಹುಂಡಿ ಹಣ ಬರುತ್ತದೆ. ಇದನ್ನೆಲ್ಲ ಸೇರಿಸಿ ₹2.50 ಕೋಟಿ ಮೊತ್ತದಲ್ಲಿ ದೇವಸ್ಥಾನ ಗೋಪುರ ಹಾಗೂ ಇತರೆ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡುವಂತೆ ಜಿಲ್ಲಾಡಳಿತ 2022ರಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪ್ರಸ್ತಾವವ ಸಲ್ಲಿಸಿದರೂ ಅನುಮತಿ ಸಿಗದ ಕಾರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.
‘ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ಸಂಬಂಧ ಭಕ್ತರು ಸಂಬಂಧಿತರಲ್ಲಿ ಸಾಕಷ್ಟು ಸಲ ಮನವಿ ಮಾಡಿಕೊಂಡಿದ್ದಾರೆ. ನಾನು ಜಿಲ್ಲಾಧಿಕಾರಿಯಿಂದ ಮುಖ್ಯಮಂತ್ರಿ ತನಕ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ 2025 ನವೆಂಬರ್‌ನಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದು, ಅರ್ಜಿದಾರರ ಮನವಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸಂಬಂಧಿತರಿಗೆ ಸೂಚನೆ ನೀಡಿದೆ. ಆದರೂ ಸಂಬಂಧಿತರು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ತಿಳಿಸಿದ್ದಾರೆ.
‘ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾವು ಸರ್ಕಾರಕ್ಕೆ ಹಣ ಕೇಳುತ್ತಿಲ್ಲ. ಭಕ್ತರು ಕೊಟ್ಟಿರುವ ಹಣದಲ್ಲಿ ಗೋಪುರ ನಿರ್ಮಿಸಲು ಅನುಮತಿ ಕೇಳುತ್ತಿದ್ದೇವೆ. ಅದನ್ನು ಕೊಡಲ್ಲ ಅಂದರೆ ಹೇಗೆ?’ ಎಂದು ಸ್ಥಳೀಯ ಲಿಂಗಾಯತ ಯುವ ಘಟಕದ ಅಧ್ಯಕ್ಷ ವೀರೇಶ್ ಅಲ್ಮಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮರೇಶ್ವರ ದೇವಸ್ಥಾನದ ಗೋಪುರ ನಿರ್ಮಾಣದ ಕ್ರಿಯಾಯೋಜನೆ ತಯಾರಿಸಿ ಎರಡು ಸಲ ಪ್ರಸ್ತಾವ ಸಲ್ಲಿಸಲಾಗಿದೆ. ಸಂಸದ ಸಾಗರ್ ಖಂಡ್ರೆ ಅವರು ನೀಡಿದ ₹1 ಕೋಟಿ ಪ್ರಸ್ತಾವವೂ ಸರ್ಕಾರಕ್ಕೆ ಹೋಗಿದೆ. ಅನುಮತಿ ಬಂದ ತಕ್ಷಣ ಕಾಮಗಾರಿ ಶುರು ಮಾಡುತ್ತೇವೆಮಹೇಶ್ ಪಾಟೀಲ್ ಔರಾದ್ ತಹಶೀಲ್ದಾರ್
ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನೀಡಿದ ಆದೇಶ ಪಾಲನೆಯಾಗಿಲ್ಲ. ಹೀಗಾಗಿ ಈಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆಗುರುನಾಥ ವಡ್ಡೆ ಸಾಮಾಜಿಕ ಹೋರಾಟಗಾರ ಔರಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.