ADVERTISEMENT

ಬೀದರ್: ಸೇವೆ ಕಾಯಂಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಧರಣಿ

ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಧರಣಿಯಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 4:10 IST
Last Updated 18 ಡಿಸೆಂಬರ್ 2024, 4:10 IST
ಬೀದರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿಯವರು  ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು
ಬೀದರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿಯವರು  ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು   

ಬೀದರ್‌: ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸರ್ಕಾರಿ ನೌಕರರಾಗಿ ನೇಮಕ ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿಯವರು ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆ ಕಾಯಂಗೊಳಿಸುವ ಸಂಬಂಧ ಈಗಾಗಲೇ ಗುಜರಾತ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಪ್ರವರ್ಗ–3 ಹಾಗೂ ಪ್ರವರ್ಗ–4ರ ಅಡಿ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಕೂಡಲೇ ಗ್ರ್ಯಾಚುಟಿ ಹಣ ಬಿಡುಗಡೆಗೊಳಿಸಬೇಕು. 2018ರಿಂದ ಕೇಂದ್ರ ಸರ್ಕಾರ ಗೌರವ ಧನ ಹೆಚ್ಚಿಸಿಲ್ಲ. ಅದನ್ನು ₹26 ಸಾವಿರಕ್ಕೆ ಹೆಚ್ಚಿಸಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಿರುವ ಭರವಸೆಯಂತೆ ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಗೌರವ ಧನವನ್ನು ₹15 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ನಿವೃತ್ತರಾದವರಿಗೆ ಇಡುಗಂಟು ಮತ್ತು ಎನ್‌ಪಿಎಸ್‌ ಹಣವನ್ನು ಮಾಸಿಕ ₹10 ಸಾವಿರ ಪಿಂಚಣಿ ನೀಡಬೇಕು. ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಎಲ್‌ಕೆಜಿ–ಯುಕೆಜಿ ಆರಂಭಿಸಬೇಕು. ಐಸಿಡಿಎಸ್‌ ಯೋಜನೆ ಜಾರಿಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಎಲ್ಲ ರೀತಿಯ ಚುನಾವಣಾ ಕೆಲಸಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕು. ಇದರಿಂದ ದೈನಂದಿನ ಕೆಲಸ ನಿರ್ವಹಿಸಲು ಹೋಗಲು ತೊಂದರೆಯಾಗುತ್ತಿದೆ. ಸಾಮೂಹಿಕ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಖಾಲಿ ಹುದ್ದೆಗಳನ್ನು ಮೂರು ತಿಂಗಳೊಳಗೆ ತುಂಬಬೇಕು. ಓವರ್‌ ಟೈಮ್‌ ಕೆಲಸ ಮಾಡಿದರೆ ಅದಕ್ಕೆ ಹೆಚ್ಚುವರಿ ಹಣ ಕೊಡಬೇಕು. ಮುಂಬಡ್ತಿ, ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಮಿನಿ ಅಂಗನವಾಡಿಗಳನ್ನು ಪೂರ್ಣ ಪ್ರಮಾಣದ ಅಂಗನವಾಡಿಗಳಾಗಿ ಪರಿವರ್ತಿಸಬೇಕು. ಮಾಸಿಕ ಸಭೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕುರ್ಚಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಮಿತಿ ಅಧ್ಯಕ್ಷೆ ಸುಶೀಲಾ ಹತ್ತಿ, ಕಾರ್ಯಾಧ್ಯಕ್ಷೆ ಶ್ರೀದೇವಿ ಚುಡೇ, ಪ್ರಧಾನ ಕಾರ್ಯದರ್ಶಿ ಜಯಶ್ರೀ, ಖಜಾಂಚಿ ಮಹದೇವಮ್ಮ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಮುಖ್ಯಾಂಶಗಳು... ಅನಿರ್ದಿಷ್ಟಾವಧಿ ಧರಣಿ ಆರಂಭ ಹೈಕೋರ್ಟ್‌ ತೀರ್ಪು ಪಾಲಿಸಿ ಗೌರವ ಧನ ಹೆಚ್ಚಳಕ್ಕೆ ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.