ADVERTISEMENT

‘ಅನ್ನಭಾಗ್ಯ’ದ ಅಕ್ಕಿ ಕಾಳಸಂತೆಗೆ: ಅಕ್ರಮ ಸಾಬೀತಾದರೆ ಪರವಾನಗಿ ರದ್ದು

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:42 IST
Last Updated 3 ಜೂನ್ 2025, 13:42 IST
ಸಭೆಯಲ್ಲಿ ಅಧಿಕಾರಿಗಳು, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು
ಸಭೆಯಲ್ಲಿ ಅಧಿಕಾರಿಗಳು, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು   

ಬೀದರ್‌: ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಫಲಾನುಭವಿಗಳಿಗಿಂತ ಹೆಚ್ಚಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ರೇಷನ್‌ ಮಳಿಗೆಗಳ ಮೂಲಕವೇ ಹೋಗುತ್ತಿದೆ’

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್‌.ಆರ್‌. ಮೆಹರೋಜ್‌ ಖಾನ್‌ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಿತಿ ಜಿಲ್ಲಾ ಘಟಕದ ಸದಸ್ಯ ರಾಜಕುಮಾರ ಈ ವಿಷಯವಾಗಿ ಗಮನ ಸೆಳೆದರು.

ಇತರೆ ಸದಸ್ಯರು ಕೂಡ ರಾಜಕುಮಾರ ಅವರ ಮಾತಿಗೆ ದನಿಗೂಡಿಸಿ, ಅಕ್ಕಿ ಮಾರಾಟ ದೊಡ್ಡ ದಂದೆಯಾಗಿದೆ. ಇದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಮೆಹರೋಜ್‌ ಖಾನ್‌ ಮಾತನಾಡಿ, ‘ಅನ್ನಭಾಗ್ಯ’ದ ಕುರಿತು ಅನೇಕ ಸದಸ್ಯರು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಇದರ ಬಗ್ಗೆ ವಿಶೇಷ ಸಭೆ ಕರೆದು, ಸಮಸ್ಯೆಯ ಮೂಲ ಪತ್ತೆ ಹಚ್ಚಬೇಕು ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಪ್ರವೀಣ್‌ ಬರಗಲ್‌ ಅವರಿಗೆ ಸೂಚಿಸಿದರು.

ಒಂದುವೇಳೆ ರೇಷನ್‌ ಮಳಿಗೆಗಳು ಅಥವಾ ಗೋದಾಮಿನಿಂದ ಕಾಳಸಂತೆಗೆ ಅಕ್ಕಿ ಹೋಗುತ್ತಿದ್ದರೆ ಅಂತಹವರ ಪರವಾನಗಿ ರದ್ದುಪಡಿಸಲು ಜಿಲ್ಲಾಧಿಕಾರಿಯವರಿಗೆ ತಿಳಿಸುವೆ. ಒಂದು ವಾರದೊಳಗೆ ಈ ಕೆಲಸವಾಗಬೇಕು ಎಂದು ನಿರ್ದೇಶನ ನೀಡಿದರು.

ಬೀದರ್‌ ಜಿಲ್ಲೆಯಲ್ಲಿ ಏಳು ಸಾವಿರ ಪಡಿತರದಾರರ ಸಮಸ್ಯೆಯಿದ್ದು, ಅದನ್ನು ಬಗೆಹರಿಸಬೇಕು. ಜಿಎಸ್‌ಟಿ ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದೆ. ಅದನ್ನು ಆದ್ಯತೆ ಮೇಲೆ ಪರಿಹರಿಸಬೇಕು. ಎಲ್ಲೂ ಕೂಡ ಅಕ್ಕಿ ಇಟ್ಟುಕೊಂಡು ಅವಧಿ ಮೀರಿದ ನಂತರ ಕೊಡುವ ಕೆಲಸ ಮಾಡಬಾರದು. ಈ ವಿಷಯದ ಬಗ್ಗೆ ಸಿಎಂ ಬಹಳ ಗಂಭೀರವಾಗಿದ್ದಾರೆ. ಯಾರು ಪಡಿತರದಾರರಿಗೆ ಅಕ್ಕಿ ವಿತರಿಸಲು ವಿಳಂಬ ಮಾಡುತ್ತಾರೆ ಅವರ ಪರವಾನಗಿ ರದ್ದುಗೊಳಿಸಬೇಕು ಎಂದು ಹೇಳಿದರು.

‘ತಾಂಡಾಗಳಿಗೆ ಬಸ್‌ಗಳೇ ಬರುವುದಿಲ್ಲ. ಭಾಲ್ಕಿ–ಘಾಟಬೋರಾಳ–ಕಲಬುರಗಿ ನಡುವೆ ಬಸ್ಸಿನ ವ್ಯವಸ್ಥೆ ಇಲ್ಲ’ ಎಂದು ಸಮಿತಿ ಸದಸ್ಯ ರಾಜಕುಮಾರ ಗಮನ ಸೆಳೆದರು. ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕೂಡ ಮಾತನಾಡಿ, ಬಸ್ಸುಗಳಿಗೆ ಟೈಂ ಟೇಬಲ್‌ ಇಲ್ಲ. ಅದನ್ನು ನಿಗದಿಗೊಳಿಸಿ, ಎಲ್ಲ ಬಸ್‌ ನಿಲುಗಡೆ ಸ್ಥಳಗಳಲ್ಲಿ ಫಲಕ ಹಾಕಬೇಕು. ಕಳೆದ ಸಭೆಯಲ್ಲೂ ಈ ಕುರಿತು ಹೇಳಿದ್ದೆ. ಆದರೆ, ಏನೂ ಆಗಿಲ್ಲ ಎಂದರು.

ಇದು ನೇರ ಜನರಿಗೆ ಸಂಬಂಧಿಸಿದ ವಿಷಯ. ಈ ಕೆಲಸ ಆದ್ಯತೆ ಮೇಲೆ ಮಾಡಬೇಕು. ಹೊಸ ಬಸ್‌ ಬೇಕಿದ್ದರೆ ತಿಳಿಸಿ ಅದಕ್ಕೂ ವ್ಯವಸ್ಥೆ ಮಾಡಲು ಉಸ್ತುವಾರಿ ಸಚಿವರು, ಸಾರಿಗೆ ಸಚಿವರಿಗೆ ಕೋರಲಾಗುವುದು ಎಂದು ಮೆಹರೋಜ್‌ ಖಾನ್‌ ಹೇಳಿದರು. ಕೆಕೆಆರ್‌ಟಿಸಿ ಬೀದರ್‌ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್‌ ಮಾತನಾಡಿ, ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲು ಶ್ರಮಿಸುವೆ ಎಂದು ಆಶ್ವಾಸನೆ ನೀಡಿದರು.

ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಹಾಜರಿದ್ದರು.

ಬೀದರ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್‌.ಆರ್‌. ಮೆಹರೋಜ್‌ ಖಾನ್‌ ಮಾತನಾಡಿದರು

‘ಯುವನಿಧಿ ಪ್ರಗತಿ ಬಹಳ ನಿಧಾನ

‘ಬೀದರ್‌ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯ ಪ್ರಗತಿ ಬಹಳ ನಿಧಾನವಾಗಿದೆ. ಇದರ ಬಗ್ಗೆ ಕಾಲೇಜುಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಉದ್ಯೋಗ ವಿನಿಮಯ ಅಧಿಕಾರಿ ಹೆಚ್ಚಿನ ಶ್ರಮ ಹಾಕಬೇಕಲ್ಲ. ಇದು ಬಿಟ್ಟು ನಿಮಗೆ ಬೇರೇನೂ ಕೆಲಸ’ ಎಂದು ಎಸ್‌.ಆರ್‌. ಮೆಹರೋಜ್‌ ಖಾನ್‌ ಅವರು ವಿ. ಪ್ರಭಾಕರ ಅವರನ್ನು ಪ್ರಶ್ನಿಸಿದರು. ಯುವನಿಧಿ ಪ್ರಗತಿಯ ಬಗ್ಗೆ ನಿಮ್ಮ ಬಳಿ ಯಾವುದೇ ಸೂಕ್ತ ಮಾಹಿತಿ ಇಲ್ಲ. ನನಗೆ ಗೊತ್ತಿರುವ ಪ್ರಕಾರ ಪ್ರಗತಿ ಸರಿಯಾಗಿಲ್ಲ. ಜಿಲ್ಲೆಗೆ ಎಷ್ಟು ಹಣ ಬಂದಿದೆ? ಎಷ್ಟು ಫಲಾನುಭವಿಗಳಿಗೆ ಕೊಟ್ಟಿದ್ದೀರಿ ಎಂಬ ವಿವರವನ್ನು ಒಂದು ವಾರದೊಳಗೆ ಕೊಡಬೇಕು ಎಂದು ನಿರ್ದೇಶನ ನೀಡಿದರು.

ಭ್ರಷ್ಟಾಚಾರವಿಲ್ಲದೆ ಶೇ 98ರಷ್ಟು ಪ್ರಗತಿ’

‘₹52 ಸಾವಿರ ಕೋಟಿ ಮೊತ್ತದಲ್ಲಿ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಭ್ರಷ್ಟಾಚಾರವಿಲ್ಲದೆ ರಾಜ್ಯದಲ್ಲಿ ಶೇ 98ರಷ್ಟು ಅನುಷ್ಠಾನಕ್ಕೆ ಬಂದಿದೆ’ ಎಂದು ಎಸ್‌.ಆರ್‌. ಮೆಹರೋಜ್‌ ಖಾನ್‌ ತಿಳಿಸಿದರು. ಜಗತ್ತಿನಲ್ಲಿಯೇ ಸರ್ಕಾರದ ಅತಿದೊಡ್ಡ ಕಾರ್ಯಕ್ರಮವಿದು. ಜಗತ್ತಿನ ಯಾವ ಸರ್ಕಾರವು ಜನರ ಕಲ್ಯಾಣಕ್ಕೆ ₹52 ಸಾವಿರ ಕೋಟಿ ಖರ್ಚು ಮಾಡುತ್ತಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈ ಕೆಲಸ ಮಾಡುತ್ತಿದೆ ಎಂದರು. ಗ್ಯಾರಂಟಿ ಯೋಜನೆಯನ್ನು ಅಧಿಕಾರಿಗಳು ಅನುಷ್ಠಾನಗೊಳಿಸುತ್ತಿದ್ದಾರೆ. ಗ್ಯಾರಂಟಿ ಸಮಿತಿ ಸದಸ್ಯರು ಇದರ ಮೇಲೆ ನಿಗಾ ವಹಿಸಬೇಕು. ಶೇ 2ರಷ್ಟು ಸಮಸ್ಯೆಗಳಿವೆ. ಅವುಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಬೇಕು. ಯೋಜನೆಯ ಬಗ್ಗೆ ಪ್ರಚಾರ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಮನೆಗಳಿಗೆ ಹೋಗಿ ಚರ್ಚಿಸಬೇಕು ಎಂದು ಸಲಹೆ ನೀಡಿದರು. ಈ ಕಾರಣಕ್ಕಾಗಿಯೇ ಮನೆ ಮನೆಗೆ ಗ್ಯಾರಂಟಿ ಯೋಜನೆ ಕಾರ್ಯಕ್ರಮ ಮಾಡಲು ಉದ್ದೇಶಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ನೇರ ಫಲಾನುಭವಿಗಳ ಮನೆಗೆ ತೆರಳಿ ಅವರ ಅಭಿಪ್ರಾಯ ದಾಖಲಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಚಿಂತನೆ ಇದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳಿಂದ ನಿರುದ್ಯೋಗ ಪ್ರಮಾಣ ಸಾಕಷ್ಟು ತಗ್ಗಿದೆ. ರಾಜ್ಯದಲ್ಲಿ ಮಹಿಳೆಯರ ಉದ್ಯಮಶೀಲತೆ ಪ್ರಮಾಣ ಹೆಚ್ಚಾಗಿದೆ. ಇದು ದೊಡ್ಡ ಸಾಧನೆ. ವಿರೋಧ ಪಕ್ಷದವರು ಗ್ಯಾರಂಟಿಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಹಣದ ಕೊರತೆ ಇಲ್ಲ. ಒಂದೆರಡು ತಿಂಗಳು ವಿಳಂಬವಾದರೂ ಎಲ್ಲ ಫಲಾನುಭವಿಗಳಿಗೆ ಖಾತೆಗೆ ನೇರ ಹಣ ಜಮೆ ಮಾಡಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.