ADVERTISEMENT

ಅರ್ಜುನ ಆನೆ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:38 IST
Last Updated 2 ಆಗಸ್ಟ್ 2025, 7:38 IST
<div class="paragraphs"><p>ಮೈಸೂರು ಮುಂಭಾಗ ಅರ್ಜುನ (ಸಂಗ್ರಹ ಚಿತ್ರ)</p></div>

ಮೈಸೂರು ಮುಂಭಾಗ ಅರ್ಜುನ (ಸಂಗ್ರಹ ಚಿತ್ರ)

   

ಬೀದರ್: ಹಾಸನದ ಯಸಳೂರು ಬಳಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಸೋಮವಾರ (ಆ.4) ಗಜಪಯಣದ ವೇಳೆ ಮಾವುತ / ಸಿಬ್ಬಂದಿಗೆ ಪ್ರಥಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕೋಟೆ ಶಾಸಕ ಅನಿಲ್ ಕುಮಾರ್ ಸಿ. ಅವರು ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸುವ ಸಲಹೆ ನೀಡಿದ್ದರು. ಈ ಸಲಹೆ ಪುರಸ್ಕರಿಸಿ, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ಹಾಗೂ ವನ್ಯಪ್ರಾಣಿಗಳನ್ನು ಸೆರೆಹಿಡಿಯುವ ಕಾರ್ಯಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾರ್ಯಚರಣೆಯನ್ನು ಯಶಸ್ವಿಗೊಳಿಸಿರುವ ಹಾಗೂ ಸೆರೆಹಿಡಿಯುವ ಆನೆಗಳನ್ನು ಪಳಗಿಸಿ ಆರೈಕೆ ಮಾಡುವಲ್ಲಿ ಯಶಸ್ವಿಯಾಗಿರುವ ಮಾವುತ/ಸಿಬ್ಬಂದಿಯನ್ನು ಗುರುತಿಸಿ ಪ್ರತಿವರ್ಷ ನಡೆಯುವ ಗಜಪಯಣದ ಸಂದರ್ಭದಲ್ಲಿ 'ಅರ್ಜುನ ಆನೆ' ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದರು.

ADVERTISEMENT

1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು, ದೇಶದ ಜನರ ಮನ ಗೆದ್ದಿದ್ದ. ಅರಣ್ಯ ಸಿಬ್ಬಂದಿಯ ಪ್ರಾಣ ಉಳಿಸಲು ಪ್ರಾಣತ್ಯಾಗ ಮಾಡಿದ ಅರ್ಜುನನ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಈ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸೋಮವಾರ ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಗಜ ಪಯಣದ ಸಂದರ್ಭದಲ್ಲಿ ಹಾಸನ, ಸಕಲೇಶಪುರ, ಕೊಡಗು ಮೊದಲಾದ ಕಡೆಗಳಲ್ಲಿ ಆನೆ ಮತ್ತು ವನ್ಯಜೀವಿ ಸೆರೆ ಕಾರ್ಯಚರಣೆಗಳಲ್ಲಿ ಯಶಸ್ವಿಯಾಗಿ ಭಾಗಿಯಾಗಿರುವ ಭೀಮ ಆನೆಯ ಮಾವುತ ಗುಂಡ ಹಾಗೂ ಕವಾಡಿ ನಂಜುಂಡಸ್ವಾಮಿ ಅವರಿಗೆ 2025ರ ಸಾಲಿನ 'ಅರ್ಜುನ ಆನೆ' ಪ್ರಶಸ್ತಿ ನೀಡಲು 2025ರ ದಸರಾ ಆನೆಗಳ ಆಯ್ಕೆ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಈಶ್ವರ ಖಂಡ್ರೆ ವಿವರಿಸಿದರು.

ಮಾವುತ ಗುಂಡ ಹಾಗೂ ಕವಾಡಿ ನಂಜುಂಡಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.