ADVERTISEMENT

ಬೀದರ್‌ಗೆ ಇನ್ನೊಂದು ಹೊಸ ವಿಶ್ವವಿದ್ಯಾಲಯ: ಸಚಿವ ಚವಾಣ್

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಕ್ರಮ: ಸಚಿವ ಚವಾಣ್

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 14:42 IST
Last Updated 25 ಆಗಸ್ಟ್ 2022, 14:42 IST
ಸಚಿವ ಪ್ರಭು ಚವಾಣ್
ಸಚಿವ ಪ್ರಭು ಚವಾಣ್   

ಬೀದರ್: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ವಿಶ್ವವಿದ್ಯಾಲಯವಾದರೂ ಇರಬೇಕು ಎನ್ನುವುದು ಸರ್ಕಾರದ ಸಂಕಲ್ಪವಾಗಿದೆ. ಇದರ ಭಾಗವಾಗಿ 'ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವುದರಿಂದ ಬೀದರ್‌ ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೆಲಸ ನಿರ್ವಹಿಸುತ್ತಿದ್ದು, ಹೊಸ ವಿಶ್ವವಿದ್ಯಾಲಯದ ಸ್ಥಾಪನೆಯಿಂದಾಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಎರಡಕ್ಕೆ ಏರಲಿದೆ ಎಂದು ಹೇಳಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವುದು ಮತ್ತು ಇಷ್ಟು ದಿನಗಳ ವರೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯವನ್ನು ಅವಲಂಬಿಸಿದ್ದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು.

ADVERTISEMENT

ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲಾ ಕೇಂದ್ರದಲ್ಲಿಯೇ ಗುಣಮಟ್ಟದ ಶಿಕ್ಷಣ ಒದಗಿಸಲು ರಾಜ್ಯ ಸರಕಾರವು ಕ್ರಾಂತಿಕಾರಕ ಕ್ರಮ ಕೈಗೊಂಡಿರುವುದರಿಂದ ಜಿಲ್ಲೆಯ ಜನತೆಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ತುತ್ತತುದಿಯಲ್ಲಿರುವ ಈ ಜಿಲ್ಲೆಯಲ್ಲಿ ಒಳ್ಳೆಯ ಶೈಕ್ಷಣಿಕ ಪರಿಸರವಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಜಿಲ್ಲೆಗೆ ಭೇಟಿ ನೀಡಿದ ವೇಳೆ ಬೀದರ್ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಷತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.