ADVERTISEMENT

ಅನುಭವ ಮಂಟಪ ಲೋಕಾರ್ಪಣೆಗೆ ರಂಭಾಪುರಿ ಶ್ರೀಗೆ ಆಹ್ವಾನ: ಶಾಸಕ ಶರಣು ಸಲಗರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:46 IST
Last Updated 1 ಅಕ್ಟೋಬರ್ 2025, 7:46 IST
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ 9ನೇ ದಿನದ 34ನೇ ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಗದಗಿನ ವಿಮುಲರೇಣುಕ ವಿರಕ್ತಮುನಿ ಶಿವಾಚಾರ್ಯರಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ಶಾಸಕ ಶರಣು ಸಲಗರ ಉಪಸ್ಥಿತರಿದ್ದರು
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ 9ನೇ ದಿನದ 34ನೇ ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಗದಗಿನ ವಿಮುಲರೇಣುಕ ವಿರಕ್ತಮುನಿ ಶಿವಾಚಾರ್ಯರಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ಶಾಸಕ ಶರಣು ಸಲಗರ ಉಪಸ್ಥಿತರಿದ್ದರು   

ಬಸವಕಲ್ಯಾಣ: ‘ನಗರದಲ್ಲಿ ₹700 ಕೋಟಿ ವೆಚ್ಚದ ನಿರ್ಮಾಣ ಹಂತದಲ್ಲಿರುವ ಅನುಭವ ಮಂಟಪ ಲೋಕಾರ್ಪಣೆಗೆ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರಿಗೆ ಆಹ್ವಾನ ನೀಡುತ್ತೇನೆ’ ಎಂದು ಶಾಸಕ ಶರಣು ಸಲಗರ ಹೇಳಿದರು.

ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ 9ನೇ ದಿನದ 34ನೇ ದಸರಾ ದರ್ಬಾರ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಸರಾ ದರ್ಬಾರ್‌ ಕಾರ್ಯಕ್ರಮದಿಂದ ಈ ನೆಲ ಪಾವನವಾಗಿದೆ. ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಬರೆಸಬೇಕು. ನಾನೂ ಅದನ್ನೇ ಬರೆಸುತ್ತೇನೆ. ಕುಟುಂಬ ಮತ್ತು ಸಮಾಜದ ವಿಕಾಸದಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ’ ಎಂದರು.

ADVERTISEMENT

ದೇವಾಪುರ ಶಿವಮೂರ್ತಿ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಾಂತ ಶಿವಚಾರ್ಯರು, ಮಾಜಿ ಶಾಸಕ ಸುಭಾಷ ಕಲ್ಲೂರ, ಮಲ್ಲಿಕಾರ್ಜುನ ಗುಂಗೆ, ಬಿಇಒ ಸಿದ್ದವೀರಯ್ಯ ರುದನೂರು, ಶಿವಕುಮಾರ ಜಡಗೆ, ರಮೇಶ ರಾಜೋಳೆ, ಶಾಂತಾ ಆನಂದ ಮಾತನಾಡಿದರು.

ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ನಿರ್ಗುಡಿ ಮಲ್ಲಯ್ಯ ಮುತ್ಯಾ, ಸುರೇಶ ಸ್ವಾಮಿ, ಶರಣಪ್ಪ ಬಿರಾದಾರ, ಚಂದ್ರಶೇಖರ ಪಾಟೀಲ, ಸೂರ್ಯಕಾಂತ ಶೀಲವಂತ, ರುದ್ರೇಶ್ವರ ಗೋರಟಾ, ಗೋವಿಂದರೆಡ್ಡಿ, ಸಿದ್ರಾಮ ಕಾವಳೆ ಮತ್ತಿತರರು ಉಪಸ್ಥಿತರಿದ್ದರು.

‘ಆಚಾರ್ಯರ ವೇಷದಲ್ಲಿ ಕಳಂಕ ತರುವವರಿದ್ದಾರೆ’

ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಮಾತನಾಡಿ ‘ಆಚಾರ್ಯರ ವೇಷದಲ್ಲಿ ಕೆಲ ಕಳಂಕಿತರು ಗುರುಕುಲದ ವಂಶಕ್ಕೆ ಕಳಂಕ ತರುತ್ತಿದ್ದಾರೆ. ಉತ್ತಮ ವಾತಾವರಣ ನಿರ್ಮಿಸುವವರೇ ಬೇರೆ ಸ್ವಾರ್ಥದ ಗೂಡು ಕಟ್ಟುವವರೇ ಬೇರೆಯಾಗಿದ್ದು ಭಕ್ತರು ಅಂಥವರಿಂದ ಮೋಸ ಹೋಗುವುದು ಸಹಜ. ಕಣ್ಣಿಗೆ ಕಾಣದ ಸ್ಥಳದಲ್ಲಿ ಹೂವು ಅರಳಿದ್ದರೂ ದುಂಬಿ ಅದನ್ನು ಹುಡುಕಿಕೊಂಡು ಹೋಗುತ್ತದೆ. ಪ್ಲಾಸ್ಟಿಕ್ ಹೂವು ಅದಕ್ಕಿಂತ ಸುಂದರವಾಗಿರುತ್ತದೆ. ಆದರೂ ದುಂಬಿ ಅಲ್ಲ ಒಂದು ನೋಣವೂ ಅದನ್ನು ಮೂಸುವುದಿಲ್ಲ. ಪ್ಲಾಸ್ಟಿಕ್ ಹೂವು ಯಾವುದು ಎಂಬುದನ್ನು ಭಕ್ತರು ಗುರುತಿಸಬೇಕು. ಅಂಥವರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಆಗುವುದನ್ನು ತಡೆಯಬೇಕು’ ಎಂದರು. ‘ಉಪಕಾರ ಮಾಡಿದವರಿಗೆ ಅಪಕಾರ ಮಾಡುವವರು ಹೆಚ್ಚಿದ್ದಾರೆ. ಮಹಾತ್ಮ ಗಾಂಧೀಜಿ ಇಂದಿರಾ ಗಾಂಧಿ ರಾಜೀವ ಗಾಂಧಿ ಒಳಗೊಂಡು ದೇಶವಿದೇಶದಲ್ಲಿ ಒಳ್ಳೆಯ ಮುತ್ಸದ್ಧಿಗಳ ಕೊಲೆ ಆಗಿದೆ. ಅವರಿಗೆ ಅಪಚಾರ ಎಸಗಲಾಗಿದೆ ಎಂಬುದು ಗೊತ್ತಿರಲಿ’ ಎಂದು ಹೇಳಿದರು.

Cಹಾರಕೂಡ ಶ್ರೀಗಳಿಂದ 10 ತೊಲೆ ಚಿನ್ನ ದೇಣಿಗೆ

ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರಿಗೆ ಹಾರಕೂಡ ಚನ್ನವೀರ ಶಿವಾಚಾರ್ಯರು 10 ತೊಲೆ ಚಿನ್ನ ನೀಡಿ ಸನ್ಮಾನಿಸಿದರು. ಪ್ರಮುಖರಾದ ಬಿ.ಕೆ.ಹಿರೇಮಠ ಪಿ.ಕೆ.ಹಿರೇಮಠ ಮಲ್ಲಿನಾಥ ಹಿರೇಮಠ ಸೂರ್ಯಕಾಂತ ಮಠ ಅಪ್ಪಣ್ಣ ಜನವಾಡಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗದಗಿನ ವಿಮುಲರೇಣುಕ ವಿರಕ್ತಮುನಿ ಶಿವಾಚಾರ್ಯರಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಿದ ಉಪನ್ಯಾಸಕಿ ಭುವನೇಶ್ವರಿ ಸಂಜೀವಕುಮಾರ ಶ್ರೀವಾಸ್ತವ ಅವರನ್ನು ಸನ್ಮಾನಿಸಲಾಯಿತು. ಹಲವರಿಗೆ ಗೌರವಶ್ರೀ ರಕ್ಷೆ ಗುರು ರಕ್ಷೆ ನೀಡಲಾಯಿತು. ಗೌರಿ ಮಠಪತಿ ಅವರಿಂದ ಭರತನಾಟ್ಯ ಪ್ರತಾಪುರದ ಗುರುಮಹಾಲಿಂಗೇಶ್ವರ ಪ್ರೌಢಶಾಲೆ ಮಕ್ಕಳಿಂದ ನೃತ್ಯ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.