ADVERTISEMENT

ಎಲ್ಲ ಹಬ್ಬಗಳ ಸ್ನೇಹ ಕೂಟ ಏರ್ಪಡಿಸಿ: ಅಕ್ಬರ್ ಅಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 13:51 IST
Last Updated 10 ಮೇ 2022, 13:51 IST
ಜಮಾಅತೆ ಇಸ್ಲಾಮಿ ಹಿಂದ್ ಸದ್ಭಾವನಾ ಮಂಚ್ ಹಾಗೂ ರಾಬ್ತಾ-ಎ-ಮಿಲ್ಲತ್ ವತಿಯಿಂದ ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಈದ್ ಮಿಲನ್ ಕಾರ್ಯಕ್ರಮದಲ್ಲಿ ಮಹಮ್ಮದ್ ಅಯಾಜ್ ಖಾನ್, ಬೆಲ್ದಾಳ್ ಸಿದ್ಧರಾಮ ಶರಣರು ಹಾಗೂ ಗುರಮ್ಮ ಸಿದ್ದಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು
ಜಮಾಅತೆ ಇಸ್ಲಾಮಿ ಹಿಂದ್ ಸದ್ಭಾವನಾ ಮಂಚ್ ಹಾಗೂ ರಾಬ್ತಾ-ಎ-ಮಿಲ್ಲತ್ ವತಿಯಿಂದ ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಈದ್ ಮಿಲನ್ ಕಾರ್ಯಕ್ರಮದಲ್ಲಿ ಮಹಮ್ಮದ್ ಅಯಾಜ್ ಖಾನ್, ಬೆಲ್ದಾಳ್ ಸಿದ್ಧರಾಮ ಶರಣರು ಹಾಗೂ ಗುರಮ್ಮ ಸಿದ್ದಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು   

ಬೀದರ್: ‘ಮನುಷ್ಯರು ಮಾದಕ ದ್ರವ್ಯ ಹಾಗೂ ಹಣದ ಮೂಲಕ ಶಾಂತಿ ಹುಡುಕುತ್ತಿದ್ದಾರೆ. ಸನ್ಯಾಸಿಯೂ ಶಾಂತಿಗಾಗಿ ಪರಿತಪಿಸುತ್ತಿದ್ದಾನೆ. ಆದರೆ, ದೇವರ ಸ್ಮರಣೆಯಿಂದ ಮಾತ್ರ ಶಾಂತಿ ಕಂಡುಕೊಳ್ಳಬಹುದಾಗಿದೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ಸದ್ಭಾವನಾ ಮಂಚ್ ಹಾಗೂ ರಾಬ್ತಾ-ಎ-ಮಿಲ್ಲತ್ ವತಿಯಿಂದ ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಏರ್ಪಡಿಸಿದ್ದ ಈದ್ ಮಿಲನ್ ಹಾಗೂ ಗೌರವ ಡಾಕ್ಟರೇಟ್ ಪುರಸ್ಕೃತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಪ್ರಾರ್ಥನಾ ಮಂದಿರಗಳಿಗಾಗಿ ಕಚ್ಚಾಟ ನಡೆದಿದೆ. ಧರ್ಮ ಇರುವುದು ಮನುಷ್ಯರ ಹೃದಯದಲ್ಲೇ ಹೊರತು ಮಂದಿರ, ಮಸೀದಿ ಹಾಗೂ ಚರ್ಚ್‍ಗಳಲ್ಲಿ ಅಲ್ಲ‌ ಎಂದು ಹೇಳಿದರು.

ADVERTISEMENT

ವಿಭಿನ್ನ ಸಮುದಾಯಗಳ ನಡುವಿನ ಭ್ರಾತೃತ್ವ ಭಾವನೆ ಹಾಗೂ ಬಾಂಧವ್ಯ ಗಟ್ಟಿಗೊಳಿಸಲು ಈದ್ ಮಿಲನ್ ಅಷ್ಟೇ ಅಲ್ಲ, ಎಲ್ಲ ಧರ್ಮಗಳ ಹಬ್ಬದ ಸಂದರ್ಭದಲ್ಲಿ ಹಬ್ಬದ ಸ್ನೇಹ ಕೂಟ ಏರ್ಪಡಿಸಬೇಕು. ಈ ರೀತಿ ಮಾಡುವುದರಿಂದ ನಾವೆಲ್ಲ ದೇವರಿಗೆ ಕೃತಜ್ಞತೆ ಸಲ್ಲಿಸಿದಂತೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರಾರ್ಥನೆಯಿಂದ ಪ್ರಭುವಿಗೆ ಕೃತಜ್ಞತೆ ಹಾಗೂ ಉಪವಾಸದಿಂದ ಆತ್ಮಶುದ್ಧಿ ಮಾಡಿಕೊಳ್ಳ ಬಹುದಾಗಿದೆ. ಉಳ್ಳುವರು ದಾನ ಧರ್ಮದ ಮೂಲಕ ಬಡವರು ಹಾಗೂ ದುರ್ಬಲರಿಗೆ ನೆರವಾಗಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಬೆಲ್ದಾಳ್ ಸಿದ್ಧರಾಮ ಶರಣರು ಮಾತನಾಡಿ, ರಂಜಾನ್‌ನಲ್ಲಿ ಮುಸ್ಲಿಮರು ಉಪವಾಸ, ನಮಾಜ್ ಹಾಗೂ ಆರಾಧನೆಗಳಿಂದ ತಮ್ಮ ಆತ್ಮವನ್ನು ಶುದ್ಧಿ ಮಾಡಿಕೊಳ್ಳುತ್ತಾರೆ. ಸೃಷ್ಟಿಕರ್ತ ಮಳೆ ಸುರಿಸುವಾಗ ನೀರು ಶುದ್ಧವಾಗಿರುತ್ತದೆ, ಆದರೆ ಭೂಮಿಯ ಮೇಲೆ ಬಿದ್ದು ಪರಿಸರಕ್ಕೆ ಅನುಗುಣವಾಗಿ ಶುದ್ಧ ಮತ್ತು ಅಶುದ್ಧವಾಗುತ್ತದೆ. ಅದರಂತೆ ಮನುಷ್ಯ ಹುಟ್ಟಿನಿಂದ ಒಳ್ಳೆಯವನಾಗಿರುತ್ತಾನೆ, ಆದರೆ ಪರಿಸರ ಅವನನ್ನು ಒಳ್ಳೆಯವ ಹಾಗೂ ಕೆಟ್ಟವನನ್ನಾಗಿ ಮಾಡುತ್ತದೆ ಎಂದರು.

ಎಲ್ಲ ಮಹಾತ್ಮರು ಸತ್ಯವನ್ನೇ ಹೇಳಿದ್ದಾರೆ. ನಾವು ಮಹಾತ್ಮರನ್ನು ಅವರ ಸಮುದಾಯಕ್ಕೆ ಸೀಮಿತಗೊಳಿಸಿ, ಸಂಕುಚಿತಗೊಳಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ರಹೀಂ ಖಾನ್, ಮುಫ್ತಿ ಮಹಮ್ಮದ್ ಫಯಾಜುದ್ದೀನ್ ನಿಝಾಮಿ, ಭಂತೆ ಜ್ಞಾನಸಾಗರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಶ್ರೀಕಾಂತ ಸ್ವಾಮಿ, ಮಿಲಿಂದ ಗುರೂಜಿ, ಸುಭಾಷ ಶೆಡೋಲೆ ಮಾತನಾಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಬೆಲ್ದಾಳ್ ಸಿದ್ಧರಾಮ ಶರಣರು, ಗುರಮ್ಮ ಸಿದ್ದಾರೆಡ್ಡಿ ಹಾಗೂ ಮಲವಿಯ ಕೇಂದ್ರೀಯ ಕ್ರಿಶ್ಚನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಮಹಮ್ಮದ್ ಅಯಾಜ್ ಖಾನ್ ಅವರನ್ನು ಸನ್ಮಾನಿಸಲಾಯಿತು.

ಮಹಮ್ಮದ್ ಆಸಿಫುದ್ದೀನ್, ಸೈಯದ್ ಅಬ್ದುಲ್ ಸತ್ತಾರ್, ರಾಜಶ್ರೀ ಸ್ವಾಮಿ ಹಾಗೂ ಮೌಲಾನಾ ಮೊನಿಶ್ ಕಿರ್ಮಾನಿ ಉಪಸ್ಥಿತರಿದ್ದರು. ಮಹಮ್ಮದ್ ಸನಾವುಲ್ಲಾ ಕುರಾನ್ ಪಠಿಸಿದರು. ಗುರುನಾಥ ಗಡ್ಡೆ ಸ್ವಾಗತಿಸಿದರು. ಸೈಯದ್ ಅಬ್ದುಲ್ ಸತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಖದೀರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.