ADVERTISEMENT

ಜಾತ್ರೆಗೆ ಮೆರಗು ತಂದ ಕಲಾ ತಂಡಗಳು

ಬೋಂತಿ ಘಮಸುಬಾಯಿ ತಾಂಡಾ: ಕಲಾವಿದರ ಜತೆಗೆ ಹೆಜ್ಜೆ ಹಾಕಿದ ಸಚಿವ ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 14:35 IST
Last Updated 11 ಫೆಬ್ರುವರಿ 2023, 14:35 IST
ಔರಾದ್ ತಾಲ್ಲೂಕಿನ ಬೋತಿ ತಾಂಡಾದಲ್ಲಿ ನಡೆದ ದೇವಿ ಜಾತ್ರೆಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿದರು
ಔರಾದ್ ತಾಲ್ಲೂಕಿನ ಬೋತಿ ತಾಂಡಾದಲ್ಲಿ ನಡೆದ ದೇವಿ ಜಾತ್ರೆಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿದರು   

ಔರಾದ್: ತಾಲ್ಲೂಕಿನ ಬೋಂತಿ ಘಮಸುಬಾಯಿ ತಾಂಡಾದಲ್ಲಿ ನಡೆಯುತ್ತಿರುವ ಜಗದಂಬಾ ಮಾತಾ ಜಾತ್ರಾ ಉತ್ಸವದಲ್ಲಿ ಕಲಾವಿದರ ಕಲೆ ಮೊಳಗಿತು.

ಜಿಲ್ಲೆ ಸೇರಿದಂತೆ ಪಕ್ಕದ ಮಹಾರಾಷ್ಟ್ರದಿಂದ ಆಗಮಿಸಿದ ವಿವಿಧ ಕಲಾ ತಂಡಗಳು ತಮ್ಮ ಅದ್ಭುತ ಕಲೆ ಪ್ರದರ್ಶಿಸಿ ಜಾತ್ರೆಗೆ ಮೆರಗು ತಂದುಕೊಟ್ಟವು.

ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಬೆಳಿಗ್ಗೆ ಧ್ವಜಾರೋಹಣದ ಮೂಲಕ ಎರಡನೇ ದಿನದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ದೇವಸ್ಥಾನದಲ್ಲಿ ಹೋಮ, ಹವನ, ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ADVERTISEMENT

ಸಚಿವರು ಕಲಾ ತಂಡಗಳೊಂದಿಗೆ ಭಜನೆ, ಕೋಲಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಉಜನಿ, ಚಟ್ನಾಳ, ಡೊಂಗರಗಾಂವ, ಮದನೂರ, ಸಂಗಮ್, ಹೆಡಗಾಪುರ, ದಾಬಕಾ, ಠಾಣಾಕುಶನೂರ, ವಡಗಾಂವ ಸೇರಿದಂತೆ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 75 ತಂಡಗಳು ಭಜನೆ, ಕೋಲಾಟ, ತಮಟೆ ವಾದನ, ಡೊಳ್ಳು ಕುಣಿತ, ಬಂಜಾರಾ ನೃತ್ಯ ಸೇರಿದಂತೆ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ ನೀಡಿದವು. ಬಳಿಕ ಕಲಾವಿದರಿಗೆ ಸಚಿವರು ಪ್ರಮಾಣ ಪತ್ರಗಳನ್ನು ವಿತರಿಸಿದರು.

‘ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಮಹಿಮೆ ಅಪಾರ. ಕಷ್ಟ ಹೇಳಿಕೊಂಡು ಬರುವ ಭಕ್ತರ ದುಮ್ಮಾನಗಳು ದೂರವಾಗುತ್ತವೆ’ ಎಂದು ಸಚಿವರು ತಿಳಿಸಿದರು.

ನನ್ನ ಮೇಲೆ ಇಚ್ಛಾಪೂರ್ತಿ ಜಗದಂಬಾ ಮಾತೆಯ ಕೃಪೆ ಹಾಗೂ ಔರಾದ್ ಕ್ಷೇತ್ರದ ಜನತೆಯ ಆಶೀರ್ವಾದವಿದೆ. ಹಾಗಾಗಿ ನಿಷ್ಕಳಂಕವಾಗಿ ಜನ ಸೇವೆ ಮಾಡಲು ಸಾಧ್ಯವಾಗಿದೆ. ನನ್ನ ಅಭಿವೃದ್ಧಿ ಕೆಲಸಗಳನ್ನು ಸಹಿಸದ ಕೆಲವರಿಂದ ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನಗಳು ನಡೆಯುತ್ತಿವೆ. ದೇವಿ ಮತ್ತು ಜನತೆಯ ಆಶೀರ್ವಾದ ಇರುವವರೆಗೆ ಇದಾವುದೂ ನಡೆಯಲ್ಲ ಎಂದು ತಿಳಿಸಿದರು.

ಪ್ರತಿಕ್ ಚವಾಣ್, ವಸಂತ ಬಿರಾದಾರ, ಶರಣಪ್ಪ ಪಂಚಾಕ್ಷರಿ, ಸುರೇಶ ಭೋಸ್ಲೆ, ಶಿವಾಜಿರಾವ ಪಾಟೀಲ, ಶಿವಾಜಿರಾವ ಕಾಳೆ, ಶಕುಂತಲಾ ಮುತ್ತಂಗೆ, ಸಚಿನ್ ರಾಠೋಡ, ಮಾರುತಿ ಪವಾರ ಹಾಗೂ ಪಂಡರಿನಾಥ ರಾಠೋಡ್ ಇದ್ದರು.

ಭಾನುವಾರ (ಫೆ.12) ಮಧ್ಯಾಹ್ನ 2 ಗಂಟೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ. ನಾಡಿನ ವಿವಿಧೆಡೆಯಿಂದ ಕುಸ್ತಿಪಟುಗಳು ಬರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.