ADVERTISEMENT

ದೇವಸ್ಥಾನ ಅಭಿವೃದ್ಧಿ ಮಾಡಿ, ಇಲ್ಲವೇ ಬಿಟ್ಟು ಕೊಡಿ: ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:41 IST
Last Updated 26 ಜುಲೈ 2025, 6:41 IST
ಔರಾದ್ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಪಡಿಸುವಂತೆ ಸ್ಥಳೀಯ ಮುಖಂಡರು ಹಾಗೂ ವಿವಿಧ ಸಂಘಟನೆ ಪ್ರಮುಖರು ತಹಶೀಲ್ದಾರ್ ಮಹೇಶ ಪಾಟೀಲ ಅವರಿಗೆ ಮನವಿಪತ್ರ ಸಲ್ಲಿಸಿದರು
ಔರಾದ್ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಪಡಿಸುವಂತೆ ಸ್ಥಳೀಯ ಮುಖಂಡರು ಹಾಗೂ ವಿವಿಧ ಸಂಘಟನೆ ಪ್ರಮುಖರು ತಹಶೀಲ್ದಾರ್ ಮಹೇಶ ಪಾಟೀಲ ಅವರಿಗೆ ಮನವಿಪತ್ರ ಸಲ್ಲಿಸಿದರು   

ಔರಾದ್: ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಇಲ್ಲಿಯ ಇತಿಹಾಸ ಪ್ರಸಿದ್ಧ ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ಕಡೆಗಣನೆಯಾಗುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಮಾಡಿ ಇಲ್ಲವೇ ನಮ್ಮ ದೇವಸ್ಥಾನ ನಮಗೆ ಬಿಟ್ಟುಕೊಡಿ ಕೊಡಿ ಎಂಬ ಬೇಡಿಕೆ ಮಂಡಿಸಿದ್ದಾರೆ.

ಕುಸಿಯುವ ಹಂತದಲ್ಲಿ ಮಹಾದ್ವಾರ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಬುಧವಾರ ಪ್ರಕಟಿಸಿದ ವಿಶೇಷ ವರದಿಯಿಂದ ಕಳವಳ ವ್ಯಕ್ತಪಡಿಸಿದ ಭಕ್ತರು ದೇವಸ್ಥಾನ ಅಭಿವೃದ್ಧಿಯಿಂದ ವಂಚಿಸಿದವರ ವಿರುದ್ಧ ಕಿಡಿ ಕಾರಿದ್ದಾರೆ.

ದೇವಸ್ಥಾನ ಮಹಾದ್ವಾರ ಶಿಥಿಲಗೊಂಡಿದ್ದು, ಈಗ ಮಳೆಗಾಲ ಇರುವುದರಿಂದ ಯಾವಾಗಾದರೂ ಬೀಳಬಹುದಾಗಿದೆ. ಈ ಸಂಬಂಧ ಮಾಧ್ಯಮಗಳಲ್ಲಿ ವರದಿಯಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಊರಿನ ಹಿರಿಯ ಮುಖಂಡ ಕಲ್ಲಪ್ಪ ದೇಶಮುಖ, ಬಸವರಾಜ ಚಾರೆ, ರವೀಂದ್ರ ಮೀಸೆ, ಬಂಡೆಪ್ಪ ಕಂಟೆ, ಪ್ರಕಾಶ ಘುಳೆ, ಕಿರಣ ಉಪ್ಪೆ, ಶರಣಪ್ಪ ಪಂಚಾಕ್ಷರಿ, ಡಾ. ಧನರಾಜ ರಾಗಾ, ಬಸವರಾಜ ಶೆಟಕಾರ, ಅನೀಲ ದೇವಕತೆ, ಅಶೋಕರೆಡ್ಡಿ, ರಾಜು ಯಡವೆ ಸೇರಿದಂತೆ ವಿವಿಧ ಸಂಘಟನೆ ಪ್ರಮುಖರು ಶುಕ್ರವಾರ ತಹಶೀಲ್ದಾರ್ ಮಹೇಶ ಪಾಟೀಲ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ್ದಾರೆ.

ಶಿಥಿಲ ಮಹಾದ್ವಾರ ನಿರ್ಮಾಣ ಸೇರಿದಂತೆ ದೇವಸ್ಥಾನ ಅಭಿವೃದ್ಧಿ ವಿಷಯದಲ್ಲಿ ಆದಷ್ಟು ಬೇಗ ಸಭೆ ಕರೆದು ಒಂದು ನಿರ್ಣಯಕ್ಕೆ ಬರುತ್ತೇವೆ ಎಂದು ತಹಶೀಲ್ದಾರ್ ಮಹೇಶ ಪಾಟೀಲ ಸ್ಥಳೀಯರಿಗೆ ಭರವಸೆ ನೀಡಿದರು.
ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯದ ವಿರುದ್ಧ ಕಾನೂನು ಹೋರಾಟ ಮಾಡಲು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.