ಔರಾದ್: ‘ನಾನು ಮಾಡುವ ಸಮಾಜಮುಖಿ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕೆಲವರಿಂದ ನಿರಂತರ ಅಡ್ಡಿ, ಅಡೆತಡೆ ಆಗುತ್ತಿದೆ. ಆದರೂ ಶಿಕ್ಷಕರನ್ನು ಗೌರವಿಸುವಂತಹ ಕಾರ್ಯಕ್ರಮ ಎಂದಿಗೂ ನಿಲ್ಲುವುದಿಲ್ಲ. ಮುಂದೆ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಮಾಡುತ್ತೇನೆ’ ಎಂದು ಶಾಸಕ ಪ್ರಭು ಚವಾಣ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಶನಿವಾರ ಇಲ್ಲಿಯ ನಾಗನಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಕಳೆದ ಆರು ತಿಂಗಳಿನಿಂದ ನನಗೆ ನಿರಂತರ ಮಾನಸಿಕ ಕಿರುಕುಳ ಕೊಟ್ಟು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವಂತೆ ಮಾಡಲಾಗುತ್ತಿದೆ. ಆದರೆ ಇದನ್ನೆಲ್ಲ ಮೆಟ್ಟಿ ನಿಲ್ಲುವ ಶಕ್ತಿ ನನಗೆ ದೇವರು ನೀಡಿದ್ದಾನೆ. ಯಾರು ಏನೇ ಮಾಡಿದರೂ ತಾಲ್ಲೂಕಿನ ಜನ ಮಾತ್ರ ನನ್ನ ಜತೆ ಇದ್ದಾರೆ. ಕಳೆದ 17 ವರ್ಷಗಳಲ್ಲಿ ತಾಲ್ಲೂಕಿನ ಅಭಿವೃದ್ಧಿ ಎಷ್ಟು ಆಗಿದೆ ಎಂದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಇಲ್ಲಿ ಶಿಕ್ಷಕರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಫಲಿತಾಂಶದಲ್ಲೂ ಸುಧಾರಣೆಯಾಗಿದೆ. ಉತ್ತಮ ಕೆಲಸ ಮಾಡಿದವರನ್ನು ಗೌರವಿಸುವುದು ನನ್ನ ಜವಾಬ್ದಾರಿ. ತಾಲ್ಲೂಕಿನ 3 ಸಾವಿರ ಶಿಕ್ಷಕರು ಇಂದಿನ ಕಾರ್ಯಕ್ರಮಕ್ಕೆ ಬಂದಿರುವುದು ತುಂಬಾ ಸಂತಸವಾಗಿದೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ್ ಮಾತನಾಡಿ, ‘ಶಾಸಕರು ತಾಲ್ಲೂಕಿನ ಶಿಕ್ಷಕರ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಗಿದೆ. ಎಲ್ಲ ಶಿಕ್ಷಕರನ್ನು ವೇದಿಕೆಗೆ ಕರೆಸಿ ಗೌರವಿಸುವ ಇಂತಹ ಕಾರ್ಯಕ್ರಮ ನಿಜಕ್ಕೂ ಹೆಮ್ಮೆಪಡುವಂತಹದ್ದು’ ಎಂದರು.
ಠಾಣಾಕುಶನೂರ ಸಿದ್ಧಲಿಂಗ ಸ್ವಾಮೀಜಿ, ಭಾಲ್ಕಿ ಮಠದ ಮಹಾಲಿಂಗ ದೇವರು, ಹೆಡಗಾಪೂರ ದಾರುಕಲಿಂಗ ಶಿವಾಚಾರ್ಯರು, ಗುಡಪಳ್ಳಿಯ ಚಂದ್ರಶೇಖರ ಶಿವಾಚಾರ್ಯರ ಸಮ್ಮುಖದಲ್ಲಿ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು.
ಪಟ್ಟಣ ಪಂಚಾಯತ್ ಅಧ್ಯಕ್ಷ ಸರುಬಾಯಿ ಘುಳೆ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗುರುಪ್ರಸಾದ, ತಹಶೀಲ್ದಾರ್ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ್ ಇಒ ಕಿರಣ ಪಾಟೀಲ, ಹಣಮಂತರಾಯ ಕೌಟಗೆ, ಪೋಷಣ ಯೋಜನೆಯ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ, ಯಶವಂತ ಡೊಂಬಾಳೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ, ಜಿಲ್ಲಾ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಸಂಘದ ಪ್ರಮುಖರಾದ ಪಂಢರಿ ಆಡೆ, ಸುನೀಲ ಕಸ್ತೂರೆ, ವಿಶ್ವನಾಥ ಬಿರಾದಾರ, ಸೂರ್ಯಕಾಂತ ಬಿರಾದಾರ, ಸಂಜೀವ ಮೇತ್ರೆ, ಬಸವರಾಜ ಪಾಟೀಲ, ನಯೀಮುದ್ದಿನ್, ಬಲಭೀಮ ಕುಲಕರ್ಣಿ, ಶಾಲೀವಾನ್ ಉದಗೀರೆ, ಬಾಲಾಜಿ ಅಮರವಾಡಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ನಿವೃತ್ತ ಶಿಕ್ಷಕರು, ಮರಣ ಹೊಂದಿದ ಶಿಕ್ಷಕರ ಅವಲಂಬಿತರು ಹಾಗೂ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ-ಕಾಲೇಜಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರತಿಭಟನಕಾರರು ಪೊಲೀಸ್ ವಶಕ್ಕೆ
‘ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ವೇದಿಕೆ ಹಾಗೂ ಇತರೆ ಕಡೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರ ಹಾಕದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಮೇಲೆ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ‘ಇದು ಸರ್ಕಾರದ ಕಾರ್ಯಕ್ರಮ. ಹೀಗಾಗಿ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯುತ್ತಿಲ್ಲ’ ಎಂದು ಸುಧಾಕರ್ ಕೊಳ್ಳೂರ್ ಸುನೀಲ ಮಿತ್ರಾ ರತ್ನದೀಪ ಕಸ್ತೂರೆ ಚಂದು ಡಿ.ಕೆ. ಮಾರುತಿ ಸೂರ್ಯವಂಶಿ ಆನಂದ ಕಾಂಬಳೆ ರಾಹುಲ್ ಜಾಧವ್ ಅನಿಲ ಒಡೆಯರ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಶಾಸಕ ಚವಾಣ್ ಆಗಮಿಸಿದಾಗ ಫೊಟೊ ಹಾಕುವ ವಿಷಯದಲ್ಲಿ ವಾಗ್ವಾದ ನಡೆಯಿತು. ಪೊಲೀಸರು ಬಂದು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ಕಾರ್ಯಕ್ರಮ ನಡೆಯಲು ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.