ADVERTISEMENT

ಔರಾದ್ ಅಗ್ನಿ ಅವಘಡ: ಸಂತ್ರಸ್ಥರ ಕಣ್ಣೀರು

ಸ್ಥಳಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 8:01 IST
Last Updated 12 ಜನವರಿ 2026, 8:01 IST
ಔರಾದ್‌ ಪಟ್ಟಣದಲ್ಲಿ ಆಕಸ್ಮಿಕ ಬೆಂಕಿಯಿಂದ ಸಂತ್ರಸ್ತ ಕುಟುಂಬದ ಮಹಿಳೆಯೊಬ್ಬರು ಶಾಸಕ ಪ್ರಭು ಚವಾಣ್‌ ಹಾಗೂ ಅಧಿಕಾರಿಗಳ ಎದುರು ಕಣ್ಣೀರಿಟ್ಟರು
ಔರಾದ್‌ ಪಟ್ಟಣದಲ್ಲಿ ಆಕಸ್ಮಿಕ ಬೆಂಕಿಯಿಂದ ಸಂತ್ರಸ್ತ ಕುಟುಂಬದ ಮಹಿಳೆಯೊಬ್ಬರು ಶಾಸಕ ಪ್ರಭು ಚವಾಣ್‌ ಹಾಗೂ ಅಧಿಕಾರಿಗಳ ಎದುರು ಕಣ್ಣೀರಿಟ್ಟರು   

ಔರಾದ್: ಪಟ್ಟಣದ ಬಸ್ ನಿಲ್ದಾಣದ ಬಳಿ ಶನಿವಾರ ನಸುಕಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾದ ಅಂಗಡಿಗಳ ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ.

ಬಾಂಡೆ ಅಂಗಡಿ, ಹಾರ್ಡವೇರ್, ಫರ್ನಿಚರ್‌ ಅಂಗಡಿ, ಫುಟವೇರ್, ಕಿರಾಣಾ ಸೇರಿದಂತೆ ಒಟ್ಟು 11 ಅಂಗಡಿಗಳು ಏಕ ಕಾಲಕ್ಕೆ ಸುಟ್ಟು ಭಸ್ಮವಾಗಿದ್ದು, ಈ ಅಂಗಡಿ ಮಾಲೀಕರ ಬದುಕು ಬೀದಿಗೆ ಬಂದಿದೆ. ಒಂದೊಂದು ಅಂಗಡಿಯಲ್ಲಿ ₹10 ರಿಂದ ₹15 ಲಕ್ಷದಷ್ಟು ಹಾನಿಯಾಗಿದೆ. ವಿದ್ಯುತ್‌ ಶಾರ್ಟ್ ಸರ್ಕಿಟ್‌ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಪ್ರಭು ಚವಾಣ್ ಅವರು ಸಂತ್ರಸ್ತ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಂಡು ಫುಟವೇರ್‌ ಅಂಗಡಿ ನಡೆಸಿ ಉಪಜೀವನ ನಡೆಸುತ್ತಿರುವ ಮಂಗಲಾಬಾಯಿ ತಾನಾಜಿ ಅವರು ಶಾಸಕರ ಎದುರು ಬಿಕ್ಕಿ ಬಿಕ್ಕಿ ಅತ್ತು ನೋವು ವ್ಯಕ್ತಪಡಿಸಿದರು. ನಮ್ಮ ಕುಟುಂಬವೇ ಈ ಅಂಗಡಿ ಮೇಲೆ ನಡೆಯುತ್ತಿತ್ತು. ಈಗ ನಾವು ಏನು ಮಾಡಬೇಕು ಎಂದು ಕನ್ಣೀರಿಟ್ಟರು.

ಎಲ್ಲ 11 ಅಂಗಡಿಗಳ ಮಾಲೀಕರ ಪರಿಸ್ಥಿತಿ ಇದೇ ರೀತಿ ಇದ್ದು, ಸರ್ಕಾರದಿಂದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ತಹಶೀಲ್ದಾರ್ ಮಹೇಶ ಪಾಟೀಲ, ಜೆಸ್ಕಾಂ ಎಇಇ ರವಿ ಕಾರಬಾರಿ, ಸ್ಥಳೀಯರು ಇದ್ದರು.

ಅಗ್ನಿಶಾಮಕ ಅಧಿಕಾರಿಗಳ ತರಾಟೆಗೆ

ಅಗ್ನಿಶಾಮಕ ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ವ್ಯಾಪಾರಿಗಳಿಗೆ ಹೆಚ್ಚಿನ ಹಾನಿ ಆಗಿದೆ ಎಂದು ಶಾಸಕ ಪ್ರಭು ಚವಾಣ್ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ 11 ಅಂಗಡಿಗಳಿಗೆ ಏಕ ಕಾಲದಲ್ಲಿ ಬೆಂಕಿ ವ್ಯಾಪಿಸಿರುವುದರಿಂದ ಇರುವ ಒಂದೇ ಅಗ್ನಿಶಾಮಕ ವಾಹನ ನಂದಿಸಲು ಸಾಧ್ಯವಾಗಿಲ್ಲ. ಅದರಲ್ಲಿ ನೀರು ಖಾಲಿಯಾಗಿ ತುಂಬಿಕೊಂಡು ವಾಪಸ್ ಬರುಷ್ಟರಲ್ಲಿ ಹಾಗೂ ಬೀದರ್, ಭಾಲ್ಕಿಯಿಂದ ಅಗ್ನಿಶಾಮಕ ವಾಹನಗಳು ಬರುವುದರೊಳಗಾಗಿ ಎಲ್ಲವೂ ಸುಟ್ಟು ಕರಕಲಾಗಿದೆ. ಇದಕ್ಕೆ ಅಗ್ನಿಶಾಮಕ ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

ಸಂತ್ರಸ್ತ ಅಂಗಡಿ ಮಾಲೀಕರಿಗೆ ನಾನು ವೈಯಕ್ತಿಕ ಸಹಾಯ ಮಾಡುತ್ತೇನೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಇವರಿಗೆ ಸಹಾಯ ಮಾಡುವಂತೆ ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.