ADVERTISEMENT

ಔರಾದ್ ಮಳೆ ಹಾನಿ: ಮುಖ್ಯಮಂತ್ರಿಗೆ ಶಾಸಕ ಚವಾಣ್ ಮನವಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 6:50 IST
Last Updated 20 ಆಗಸ್ಟ್ 2025, 6:50 IST
ಔರಾದ್ ಶಾಸಕ ಪ್ರಭು ಚವಾಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಳೆ ಹಾನಿ ಕುರಿತು ಮನವರಿಕೆ ಮಾಡಿದರು
ಔರಾದ್ ಶಾಸಕ ಪ್ರಭು ಚವಾಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಳೆ ಹಾನಿ ಕುರಿತು ಮನವರಿಕೆ ಮಾಡಿದರು   

ಔರಾದ್: ‘ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ವ್ಯಾಪಕ ‌ಹಾನಿಯಾಗಿದೆ’ ಎಂದು ಶಾಸಕ ಪ್ರಭು ಚವಾಣ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಮನವರಿಕೆ ಮಾಡಿಕೊಟ್ಟರು.
‘ಮಳೆ ಜಾಸ್ತಿಯಾಗಿ ಬಿತ್ತನೆಯಾದ ಸೋಯಾಬಿನ್, ಉದ್ದು, ಹೆಸರು, ಹತ್ತಿ ಮುಂತಾದ ಪ್ರಮುಖ ಕೃಷಿ ಬೆಳೆಗಳು ನೀರುಪಾಲಾಗಿವೆ. ಸಾವಿರಾರು ಹೆಕ್ಟೇರ್ ಬೆಳೆ ನಷ್ಟವಾಗಿದೆ. 100ಕ್ಕೂ ಹೆಚ್ಚು ಜಾನುವಾರುಗಳು ಸಾವನಪ್ಪಿವೆ’ ಎಂದು ತಿಳಿಸಿದ್ದಾರೆ.

‘ರೈತರು ಸಾಲ ಮಾಡಿ ಬೆಳೆದ ಬೆಳೆಗಳು ನೆಲಸಮವಾಗಿವೆ. ಅವರ ಭವಿಷ್ಯ ಗೊಂದಲಕ್ಕೆ ತಳ್ಳಲ್ಪಟ್ಟಿದೆ. ಜೊತೆಗೆ ಗ್ರಾಮಗಳು ಜಲಾವೃತಗೊಂಡು ಸುಮಾರು 50ಕ್ಕೂ ಹೆಚ್ಚು ಮನೆಗಳು ಕುಸಿದು ಕುಟುಂಬಗಳು ಬೀದಿಗೆ ಬಂದಿವೆ. ಅಷ್ಟೇ ಅಲ್ಲದೆ, ನಂದಿ ಬಿಜಲಗಾಂವ-ಚಿಕ್ಲಿ ಸೇತುವೆ, ಸಾವರಗಾಂವ-ಹಂಗರಗಾ ಸೇತುವೆ ಸೇರಿ ಹಲವು ಸೇತುವೆ, ಕೆರೆ-ಕಟ್ಟೆಗಳು ಒಡೆದು ಹಾನಿ ಆಗಿದೆ. ರಸ್ತೆ, ವಿದ್ಯುತ್, ನೀರು ಸರಬರಾಜು ವ್ಯವಸ್ಥೆ ಹಾನಿಗೊಳಗಾಗಿದ್ದು, ಸಾರಿಗೆ, ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉಗ್ರಾಣ, ಶಾಲೆ, ಅಂಗನವಾಡಿಗಳು, ಸರ್ಕಾರಿ ಕಚೇರಿಗಳು ನೀರಿನಿಂದ ಹಾನಿಗೊಂಡು ಕಚೇರಿ ಕೆಲಸಗಳಿಗೂ ಅಡೆತಡೆಯಾಗುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಇಂತಹ ಸಂಕಷ್ಟದ ಸಮಯದಲ್ಲಿ ಔರಾದ್ ಕ್ಷೇತ್ರ ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮನವಿ‌ ಮಾಡಿದರು. ಈ ಸಂಬಂಧ ಕಂದಾಯ ಸಚಿವ ಕೃಷ್ಣಭೈರೇಗೌಡ, ಕೃಷಿ ಸಚಿವ ಚೆಲುವರಾಯಸ್ವಾಮಿ‌ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರನ್ನೂ ಭೇಟಿ‌ ಮಾಡಿ ಮನವಿ ಸಲ್ಲಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.