ಔರಾದ್: ಪಟ್ಟಣದ ಬಸವ ಗುರುಕುಲ ಶಾಲೆ ಬಳಿ ನೂತನವಾಗಿ ನಿರ್ಮಿಸಲಾದ ಗ್ರಂಥಾಲಯ ಕಟ್ಟಡ ಬಳಕೆಗೆ ಮುನ್ನವೇ ಹಾಳಾಗುತ್ತಿದೆ.
ಇಲ್ಲಿಯ ವಿದ್ಯಾರ್ಥಿಗಳು ಹಾಗೂ ಪ್ರಜ್ಞಾವಂತರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕೆಕೆಆರ್‌ಡಿಬಿ ಯೋಜನೆಯಡಿ ₹30 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಿದೆ. 2021-22ನೇ ಸಾಲಿನ ಅನುದಾನದಲ್ಲಿ ಈ ಕಟ್ಟಡ ಕಾಮಗಾರಿ ಮುಗಿದು ವರ್ಷ ಕಳೆದರೂ ಅದರ ಬಾಗಿಲು ತೆರೆದಿಲ್ಲ. ಹೊಸ ಕಟ್ಟಡದ ಸುತ್ತ ಮುಳ್ಳುಕಂಟಿ ಬೆಳೆದಿದೆ. ಅಲ್ಲಿಗೆ ಹೋಗಲು ಸರಿಯಾದ ರಸ್ತೆಯೂ ಇಲ್ಲದೆ ನೂತನ ಕಟ್ಟಡ ಹಾಳು ಕೊಂಪೆಯಾಗಿ ಪರಿಣಮಿಸಿದೆ.
ಔರಾದ್ ಪಟ್ಟಣದ ತಾಲ್ಲೂಕು ಕೇಂದ್ರದಲ್ಲಿ ಎರಡು ದಶಕದಿಂದಲೂ ಸೂಕ್ತ ಗ್ರಂಥಾಲಯ ಕಟ್ಟಡ ಇಲ್ಲ. ಮೊದಲು ಗೃಹರಕ್ಷಕ ದಳದ ಕಟ್ಟಡದಲ್ಲಿ ಗ್ರಂಥಾಳಯ ನಡೆಯುತ್ತಿತ್ತು. ಅದು ಶಿಥಿಲಗೊಂಡ ಕಾರಣ ಈಗ ಬಸವನಗಲ್ಲಿ ಸರ್ಕಾರಿ ಶಾಲೆಯ ಎರಡು ಕೊಠಡಿಗಳಲ್ಲಿ ಓದುಗರಿಗೆ ವ್ಯವಸ್ಥೆ ಮಾಡಲಾಗಿದೆ. ಶಾಸಕ ಪ್ರಭು ಚವಾಣ್ ಅವರಿಗೆ ತಿಳಿಸಿ ಹೊಸ ಕಟ್ಟಡ ಕಟ್ಟಿಸಿದರೂ ಸಂಬಂಧಿತರು ಅದನ್ನು ಬಳಸಿಕೊಳ್ಳಲು ತಯಾರಿಲ್ಲ ಎಂದು ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಬೇರೆ ಎಲ್ಲಿಯೂ ಸೂಕ್ತ ಸ್ಥಳವಕಾಶ ಸಿಗದ ಕಾರಣ ಮೂರು ವರ್ಷಗಳಿಂದ ಸರ್ಕಾರಿ ಶಾಲೆಯ ಎರಡು ಕೊಠಡಿಗಳಲ್ಲಿ ಓದುಗರಿಗೆ ವ್ಯವಸ್ಥೆ ಮಾಡಿದ್ದೇವೆ. ನಿತ್ಯ ಸಾಕಷ್ಟು ಸಂಖ್ಯೆ ಓದುಗರು ಬರುತ್ತಿರುವುದರಿಂದ ಹೊಸ ಕಟ್ಟಡದ ಅಗತ್ಯವಿದೆ’ ಎಂದು ಹೇಳುತ್ತಾರೆ ಗ್ರಂಥಪಾಲಕ ಝರೆಪ್ಪ.
‘ಔರಾದ್ ಪಟ್ಟಣದಲ್ಲಿ ನಿರ್ಮಿತಿ ಕೇಂದ್ರದವರು ಗ್ರಂಥಾಲಯ ಕಟ್ಟಡ ಕಟ್ಟಿದ್ದಾರೆ. ಆದರೆ ಅದರಲ್ಲಿ ಪೀಠೋಪಕರಣಗಳು ಇಲ್ಲ. ವಿದ್ಯುತ್ ಸೇರಿದಂತೆ ಕೆಲ ಅಗತ್ಯ ಕೆಲಸ ಆಗಬೇಕಿದೆ. ಈಗಾಗಲೇ ಈ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಸ್ಥಳೀಯ ಶಾಸಕರನ್ನು ಭೇಟಿಯಾಗಿ ಆದಷ್ಟು ಬೇಗ ನೂತನ ಗ್ರಂಥಾಲಯ ಕಟ್ಟಡ ಓದುಗರ ಬಳಕೆಗೆ ಅನುವು ಮಾಡಿಕೊಡಲಾಗುವುದು’ ಎಂದು ಕೇಂದ್ರ ಗ್ರಂಥಾಲಯದ ಮುಖ್ಯಾಧಿಕಾರಿ ಸಿದ್ಧಾರ್ಥ ಭಾವಿಕಟ್ಟಿ ತಿಳಿಸಿದ್ದಾರೆ.
ಔರಾದ್ ಪಟ್ಟಣದ ನೂತನ ಗ್ರಂಥಾಲಯ ಕಟ್ಟಡದಲ್ಲಿ ಕೆಲ ಅಗತ್ಯ ಕೆಲಸ ಆಗಬೇಕಿದೆ. ಆದಷ್ಟು ಬೇಗ ಅದನ್ನು ಮಾಡಿ ಓದುಗರಿಗೆ ಬಳಸಲು ಅನುವು ಮಾಡಿಕೊಡಲಾಗುವುದು- ಸಿದ್ಧಾರ್ಥ ಭಾವಿಕಟ್ಟಿ ಗ್ರಂಥಾಲಯ ಮುಖ್ಯಾಧಿಕಾರಿ
‘ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಿದರೆ ಸಾಲದು. ಅದರಲ್ಲಿ ಓದುಗರಿಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಬೇಕು. ಹೊಸ ಹೊಸ ಪುಸ್ತಕಗಳು, ಜತೆಗೆ ಆನ್‌ಲೈನ್ ಪತ್ರಿಕೆ ಓದಲು ವ್ಯವಸ್ಥೆ ಕಲ್ಪಿಸಬೇಕು’ ಎಂದು ಇಲ್ಲಿಯ ಓದುಗರು ಬೇಡಿಕೆ ಮಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.