
ಔರಾದ್: ‘ಪಟ್ಟಣದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ, ಅದರಂತೆ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು’ ಎಂದು ಶಾಸಕ ಪ್ರಭು ಚವಾಣ್ ತಿಳಿಸಿದರು.
ಪಟ್ಟಣದಲ್ಲಿ ಈಚೆಗೆ ಸಿಸಿ ರಸ್ತೆ, ಚರಂಡಿ ಸೇರಿದಂತೆ ₹ 2.50 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪಟ್ಟಣದಲ್ಲಿ ಮಾಸ್ಟರ್ ಪ್ಲಾನ್ ಪ್ರಕಾರ ಕೆಲಸ ಮಾಡಲು ಮಂಜೂರಾತಿ ಪಡೆಯಲಾಗಿದೆ. ಪ್ರತಿ ವಾರ್ಡ್‌ನಲ್ಲಿ ರಸ್ತೆ, ಚರಂಡಿ, ಬೆಳಕು ಮತ್ತು ನೀರಿನ ಸೌಲಭ್ಯ ಸುಧಾರಿಸಲಾಗುತ್ತಿದೆ. ಬಹು ವರ್ಷಗಳ ಬೇಡಿಕೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ’ ಎಂದು ಹೇಳಿದರು.
‘ಪಟ್ಟಣದಲ್ಲಿ ರಸ್ತೆ, ಚರಂಡಿ, ಬೀದಿಗಳ ಸ್ವಚ್ಛತಾ ಕಾರ್ಯ ಪ್ರತಿದಿನ ಅಚ್ಚುಕಟ್ಟಾಗಿ ನಡೆಸಬೇಕು. ಕಸ ವಿಲೇವಾರಿ, ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ ವ್ಯವಸ್ಥಿತವಾಗಿ ಆಗಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದರು.
‘ಕಸದ ವಾಹನಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ರಸ್ತೆ ಮತ್ತು ಚರಂಡಿಗಳಲ್ಲಿ ಕಸ ತುಂಬದಂತೆ ನೋಡಿಕೊಳ್ಳಬೇಕು. ಮುಖ್ಯ ರಸ್ತೆಯಲ್ಲಿರುವ ಹೋಟೆಲ್, ಅಂಗಡಿಗಳು ಹಾಗೂ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ಸ್ವಚ್ಛತೆ ಕಾಪಾಡುವಂತೆ ಸೂಚನೆಗಳನ್ನು ನೀಡಬೇಕು’ ಎಂದು ಸಲಹೆ ನೀಡಿದರು.
ಮುಖಂಡ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ದಯಾನಂದ ಘಳೆ, ಸಂಜು ವಡೆಯರ, ರಾಮ ನರೋಟೆ, ಸಂತೋಷ ಪೋಕಲವಾರ, ಕೇರಬಾ ಪಬಾರ, ಗುಂಡು ಮುದಾಳೆ, ಯಾದವರಾವ ಮೇತ್ರೆ, ಬಾಬು ರಾಠೋಡ, ಸಚಿನ ರಾಠೋಡ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.