ADVERTISEMENT

ಔರಾದ್: ‘ಪರಿಸರ ಮಿತ್ರ’ ಶಾಲೆಗೆ ಶಾಸಕ ಚವಾಣ್ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 14:12 IST
Last Updated 23 ಮಾರ್ಚ್ 2025, 14:12 IST
ಔರಾದ್ ತಾಲ್ಲೂಕಿನ ಸೋರಳ್ಳಿ ತಾಂಡಾ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕ ಪ್ರಭು ಚವಾಣ್ ಅವರನ್ನು ಮಕ್ಕಳು, ಪಾಲಕರು ಸ್ವಾಗತಿಸಿದರು
ಔರಾದ್ ತಾಲ್ಲೂಕಿನ ಸೋರಳ್ಳಿ ತಾಂಡಾ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕ ಪ್ರಭು ಚವಾಣ್ ಅವರನ್ನು ಮಕ್ಕಳು, ಪಾಲಕರು ಸ್ವಾಗತಿಸಿದರು   

ಔರಾದ್: ಮೂಲಸೌಲಭ್ಯ ಕೊರತೆ ನಡುವೆಯೂ ಅಂದಚಂದದ ಪರಿಸರ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ತಾಲ್ಲೂಕಿನ ಸೋರಳ್ಳಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭಾನುವಾರ ಶಾಸಕ ಪ್ರಭು ಚವಾಣ್ ಭೇಟಿ ನೀಡಿ ಮಕ್ಕಳ ಜತೆ ಕೆಲ ಹೊತ್ತು ಕಳೆದರು.

ಭಾನುವಾರ ಇದ್ದರೂ ಶಾಸಕರು ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಶಿಕ್ಷಕರು ಹಾಗೂ ಮಕ್ಕಳು ಶಾಲೆಯಲ್ಲಿಯೇ ಉಳಿದು ಅವರನ್ನು ಸ್ವಾಗತಿಸಿದರು.

‘ಶಾಲೆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಬಂದ ವರದಿ ನೋಡಿ ನನಗೆ ತುಂಬಾ ಖುಷಿಯಾಗಿದೆ. ಶಾಲಾ ಆವರಣ ಎಷ್ಟು ಅಂದವಾಗಿಟ್ಟಿದ್ದೀರಿ. ಮಕ್ಕಳಲ್ಲಿನ ಲವಲವಿಕೆ ನೋಡಿದರೆ ಇದೊಂದು ಮಾದರಿ ಸರ್ಕಾರಿ ಶಾಲೆ ಎನಿಸುತ್ತಿದೆ. ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳು ಇದೇ ರೀತಿ ಆಗಬೇಕು. ಇದಕ್ಕಾಗಿ ನಾನು ಎಲ್ಲ ರೀತಿಯಿಂದ ಸಹಕಾರ ನೀಡಲು ಸಿದ್ಧ’ ಎಂದು ಹೇಳಿದರು.

ADVERTISEMENT

‘ಈ ಸೋರಳ್ಳಿ ತಾಂಡಾ ಶಾಲೆಗೆ ಹೊಸ ಕಟ್ಟಡ, ಕಂಪೌಂಡ್‌ ಗೋಡೆ ಹಾಗೂ ಕೂಡು ರಸ್ತೆ ಆದಷ್ಟು ಬೇಗ ಮಾಡಿಕೊಡಲಾಗುವುದು’ ಎಂದು ಶಿಕ್ಷಕರಿಗೆ ಹಾಗೂ ಪಾಲಕರಿಗೆ ಶಾಸಕರು ಭರವಸೆ ನೀಡಿದರು.

‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ‘ತಾಂಡಾದಲ್ಲೊಂದು ಪರಿಸರ ಮಿತ್ರ ಶಾಲೆ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.


ಗಡಿ ಗ್ರಾಮ, ತಾಂಡಾಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ

ಔರಾದ್: ಶಾಸಕ ಪ್ರಭು ಚವಾಣ್ ಅವರು ಭಾನುವಾರ ತಾಲ್ಲೂಕಿನ ಗಡಿ ಭಾಗದ ವಿವಿಧ ಗ್ರಾಮ ಹಾಗೂ ತಾಂಡಾಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ವಾಡೇನ್‌ಬಾಗ್ ತಾಂಡಾ, ಸೋರಳ್ಳಿ ತಾಂಡಾ, ಘಮಾ ತಾಂಡಾ, ಮಹಾರಾಜವಾಡಿ ತಾಂಡಾ, ಮಹಾರಾಜ ರೂಪ್ಲಾ ತಾಂಡಾಗಳಲ್ಲಿ ₹22.50 ಲಕ್ಷ ಮೊತ್ತದ ಅಂಗನವಾಡಿ ಕಟ್ಟಡ ಮತ್ತು ಲಚಿರಾಮ ತಾಂಡಾದಲ್ಲಿ ₹5 ಲಕ್ಷದ ಸಮುದಾಯ ಭವನ ಕಾಮಗಾರಿಗೆ ಪೂಜೆ ನೆರವೇರಿಸಿದರು.

ಇದೇ ವೇಳೆ ಜನರ ಸಮಸ್ಯೆ ಆಲಿಸಿದ ಅವರು ‘ಕುಡಿಯುವ ನೀರು, ರಸ್ತೆ, ವಿದ್ಯುತ್‌ನಂತಹ ಮೂಲಸೌಲಭ್ಯ ಕಲ್ಪಿಸಲು ಅನುದಾನ ಒದಗಿಸುವುದಾಗಿ ಹೇಳಿದರು.

‘ಅಭಿವೃದ್ಧಿ ಕೆಲಸ ನನ್ನ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಗ್ರಾಮ ಸಂಚಾರ ನಡೆಸಿ ಜನರ ಕುಂದು ಕೊರತೆ ಆಲಿಸಿದ್ದೇನೆ. ಈಗ ಬೇಸಿಗೆ ಇರುವುದರಿಂದ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸಬಾರದು. ಈ ನಿಟ್ಟಿನಲ್ಲಿ ಗಡಿ ಗ್ರಾಮಗಳಿಗೆ ಭೇಟಿ ನೀಡಿ ನೀರು ಪೂರೈಕೆ ಬಗ್ಗೆ ಖಾತರಿ ಪಡಿಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿದರು.

‘ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಔರಾದ್ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹೊಸ ಕಟ್ಟಡ ಕಟ್ಟಲು ₹21 ಕೋಟಿ ಮಂಜೂರು ಆಗಿದೆ. ಇದು ನಿಮ್ಮ ಮಕ್ಕಳು ಓದಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಮುಖಂಡ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಪ್ರದೀಪ ಪವಾರ್, ಪ್ರಕಾಶ ಜೀರ್ಗೆ, ರವೀಂದ್ರ ರೆಡ್ಡಿ, ಸಂಜು ಚವಾಣ್, ಲಕ್ಷ್ಮಣ ರಾಠೋಡ್, ನರಸಿಂಗ್ ಬುದ್ರೆ, ನವನಾಥ ಭಾಲ್ಕೆ, ದೀಪಕ ಸಜ್ಜನಶೆಟ್ಟಿ, ಸುರಾ ನಾಯಕ್, ಬಾಲಾಜಿ ಪಾಟೀಲ, ಸಂದೀಪ ಪಾಟೀಲ, ಅಭಂಗ ತಾಡಮಲ್ಲೆ, ಪ್ರಕಾಶ ಮೇತ್ರೆ, ಶೇಷರಾವ ರಾಠೋಡ್, ಶ್ರೀನಿವಾಸ ಖೂಬಾ, ಗೋಪಿನಾಥ ರಾಠೋಡ್, ವಿಠಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.