ಔರಾದ್: ‘ತಾಲ್ಲೂಕಿನ ನಾಗೂರ(ಬಿ) ಗ್ರಾಮದ ಬಳಿ ₹118 ಕೋಟಿ ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ 220 ಕೆ.ವಿ. ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಕಳಪೆಯಾಗಿದ್ದು, ಈ ಸಂಬಂಧ ತನಿಖೆ ನಡೆಸಬೇಕು’ ಎಂದು ಶಾಸಕ ಪ್ರಭು ಚವಾಣ್ ಆಗ್ರಹಿಸಿದ್ದಾರೆ.
‘ನಂಜುಂಡಪ್ಪ ವರದಿಯಂತೆ ಹಿಂದುಳಿದ ಪ್ರದೇಶವಾದ ಇಲ್ಲಿ ರೈತರಿಗೆ ನಿಯಮಿತ ವಿದ್ಯುತ್ ಪೂರೈಕೆ ಹಾಗೂ ಸಣ್ಣಪುಟ್ಟ ಕಾರ್ಖಾನೆ ಸ್ಥಾಪಿಸಿ ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಬಹಳ ಪ್ರಯತ್ನಗಳ ನಂತರ ವಿದ್ಯುತ್ ಉಪಕೇಂದ್ರಕ್ಕೆ ಮಂಜೂರಾತಿ ಸಿಕ್ಕಿದೆ. ಆದರೆ, ಈ ಉಪ ಕೇಂದ್ರದ ಕಾಮಗಾರಿ ಅಂದಾಜುಪಟ್ಟಿಯಂತೆ ಆಗುತ್ತಿಲ್ಲ. ಕಾಮಗಾರಿಗೆ ಅತ್ಯಾಧುನಿಕ ಉಪಕರಣ ಬಳಸುವ ಬದಲು ಎಲ್ಲಿಂದಲೂ ತಂದ ಹಳೆಯ ಉಪಕರಣಗಳು ಬಳಸಲಾಗುತ್ತಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
‘ಈ ರೀತಿಯ ಕಳಪೆ ಕಾಮಗಾರಿ ಆಗಲು ಅಧಿಕಾರಿಗಳು ಗುತ್ತಿಗೆದಾರರ ಜೊತೆಗೆ ಶಾಮೀಲಾಗಿರುವ ಸಾಧ್ಯತೆ ಇದೆ. ತಕ್ಷಣ ಕಾಮಗಾರಿ ತಡೆಹಿಡಿದು ಸ್ವತಂತ್ರ ತನಿಖೆ ನಡೆಸಬೇಕು. ಈ ಬಗ್ಗೆ ಇಂಧನ ಸಚಿವರು ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆದಿರುವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.