
ಔರಾದ್: ‘ಪಟ್ಟಣದ ವಿವಿಧೆಡೆ ಕಳೆದ ನಾಲ್ಕು ದಶಕಗಳಿಂದ ಗುಡಿಸಲುಗಳಲ್ಲಿ ವಾಸವಿರುವ ಜನರಿಗೆ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಿ ಕೊಡದೆ ಇದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತ ರಾಹುಲ್ ಖಂದಾರೆ ಹೇಳಿದರು.
ಪಟ್ಟಣದ ಬಹುಜನ ಸಂಪರ್ಕ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪಟ್ಟಣದ ವಿವಿಧೆಡೆ ಖಾಸಗಿ ಜಾಗ ಹಾಗೂ ರಸ್ತೆ ಬದಿಯ ಗುಡಿಸಲು ವಾಸಿಗಳ ಬದುಕು ಅತಂತ್ರವಾಗಿದೆ. 200ಕ್ಕೂ ಹೆಚ್ಚು ಕುಟುಂಬಗಳು ಕಳೆದ ನಾಲ್ಕು ದಶಕಗಳಿಂದ ನಾಗರಿಕರಿಗೆ ಸಿಗಬೇಕಾದ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಜನಪ್ರತಿನಿಧಿಗಳು ಇವರನ್ನು ಕೇವಲ ಮತದಾನಕ್ಕಾಗಿ ಬಳಸಿಕೊಂಡು ಬೀಸಾಡಿದ್ದಾರೆ. ಅಧಿಕಾರಿಗಳು ಇವರಿಗೆ ಸರ್ಕಾರಿ ಸೌಲಭ್ಯ ಕೊಡಲು ವಿಫಲರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಗುಡಿಸಲುವಾಸಿಗಳು ತಮ್ಮ ಬದುಕಿಗಾಗಿ ಆಶ್ರಯ ಮನೆ ಕೊಡಲು ದಶಕದಿಂದ ಹೋರಾಟ ಮಾಡುತ್ತಿದ್ದಾರೆ. ಪಟ್ಟಣದ ಸರ್ವೆ ನಂಬರ್ 183ರಲ್ಲಿ ಇವರಿಗೆ ನಿವೇಶನ ಕೊಡಲು 2 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಲಾಗಿದೆ. ಆದರೆ ಇದನ್ನು ರದ್ದು ಮಾಡಿ ಪಟ್ಟಣದ 10 ಕಿ.ಮೀ. ದೂರದ ಮಹಾಡೊಣಗಾಂವ್ ಬಳಿ 2 ಎಕರೆ ಜಮೀನು ಕೊಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ರೀತಿ ಗುಡಿಸಲುವಾಸಿಗಳನ್ನು ವಿನಾಕಾರಣ ತೊಂದರೆ ಮಾಡಲಾಗುತ್ತಿದೆ’ ಎಂದು ದೂರಿದರು.
‘ಈ ಗುಡಿಸಲುವಾಸಿಗಳ ಪೈಕಿ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರು ಸೇರಿ 200 ಕುಟುಂಬಗಳಿವೆ. ಈ ಎಲ್ಲ ಕುಟುಂಬಗಳಿಗೆ ಒಂದೇ ಕಡೆ 5 ಎಕರೆ ಜಮೀನು ಮಂಜೂರು ಮಾಡಿ ಹಂಚಿಕೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಇದೇ 18ರಿಂದ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟ ಧರಣಿ ನಡೆಸಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಸುಭಾಷ ಲಾಧಾ ತಿಳಿಸಿದರು.
ಭಟ್ಕೆ ಸಮಾಜದ ಅಧ್ಯಕ್ಷ ನಾಗನಾಥ ವಾಕುಡೆ, ಪಪಂ. ಸದಸ್ಯ ಶಿವಾಜಿ ರಾಠೋಡ್, ಗಣಪತಿ ಶೆಂಬೆಳ್ಳಿ, ಸಂತೋಷ ಸಿಂಧೆ, ದಿನೇಶ ಸಿಂಧೆ, ಸಂತೋಷ ಸೂರ್ಯವಂಶಿ, ಪ್ರವೀಣ ಕಾರಂಜೆ, ಸುಂದರ ಮೇತ್ರೆ, ಸಿದ್ಧಾರ್ಥ ಬಾದಲಗಾಂವ್, ಅಖಿಲೇಶ್ ಸಾಗರ, ಸಿದ್ಧಾರ್ಥ ಭೋಸ್ಲೆ, ನವನಾಥ ಕಾಂಬಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.