
ಭಾಲ್ಕಿ: ‘ದೇಶದ ಭಾವಿ ಪ್ರಜೆಗಳಾಗಿರುವ ವಿದ್ಯಾರ್ಥಿಗಳನ್ನು ಗುಣಾತ್ಮಕ ಶಿಕ್ಷಣದ ಮೂಲಕ ಸುಸಂಸ್ಕೃತ ನಾಗರಿಕರನ್ನಾಗಿಸುವ ಮೂಲಕ ದೇಶದ ಭದ್ರ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ’ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ವಿದ್ಯಾರತ್ನ, ಸೇವಾ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣ ಇಲಾಖೆಯಲ್ಲಿ ಸೇವೆ ಮಾಡುವುದೆಂದರೆ ಸಾಮಾಜಿಕ ರಂಗದಲ್ಲಿ ಎಲ್ಲರ ಸೇವೆ ಮಾಡಿದಂತೆ. ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸುವ ನೌಕರರು ಮತ್ತು ಅಧಿಕಾರಿಗಳು ಆಮಿಷಗಳಿಗೆ ಒಳಗಾಗದೇ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಬೇಕು. ಉತ್ತಮ ಶಿಕ್ಷಕರನ್ನು ಗುರುತಿಸಿ, ‘ವಿದ್ಯಾರತ್ನ ಪ್ರಶಸ್ತಿ’ ಮತ್ತು ಉತ್ತಮ ನೌಕರರನ್ನು ಗುರುತಿಸಿ ‘ಸೇವಾಭೂಷಣ ಪ್ರಶಸ್ತಿ’ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಜಿಲ್ಲಾದ್ಯಕ್ಷ ಸುರೇಶ ಟಾಳೆ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಅಧ್ಯಕ್ಷ ಸೋಮನಾಥಪ್ಪ ರಾಜೇಶ್ವರೆ ಘನ ಉಪಸ್ಥಿತಿ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಹಣಮಂತ ಕಾರಾಮುಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಅಭಿವೃದ್ಧಿ ಉಪನಿರ್ದೇಶಕ ಗುರುಪ್ರಸಾದ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಚಿದ್ರಿ, ಎಂ.ಡಿ. ಇಸ್ಮಾಯಿಲ್, ರಜನಿಗಂದ ನಿಣ್ಣೇಕರ, ಮುರಳಿಧರ ಎಲ್.ಎ., ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜ ಕಪಲಾಪುರೆ, ಪ್ರಕಾಶ ಟಾಳೆ, ಲಿಪಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಜಕ್ಕಾ, ಬಸವರಾಜ ಪಾಟೀಲ, ಶಿವಕುಮಾರ ಸದಾಫುಲೆ, ಗಣಪತಿ ಭಕ್ತಾ, ಮಹೆಬೂಬ ಪಟೇಲ, ಅಂಕುಶ ಢೋಲೆ, ಬಿಕೆಐಟಿ ಪ್ರಾಂಶುಪಾಲ ಉದಯಕುಮಾರ ಕಲ್ಯಾಣೆ, ಪ್ರೌಢಶಾಲಾ ಮುಖ್ಯಶಿಕ್ಷಕ ಸಂಘದ ರಾಜಕುಮಾರ ಜೊಳದಾಪಕೆ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ, ಮಲ್ಲಿನಾಥ ಸಜ್ಜನ, ಶಿವಕುಮಾರ ಫುಲಾರಿ, ಸೂರ್ಯಕಾಂತ ಪಾಟೀಲ ಸೇರಿದಂತೆ ಅನೇಕರು ಹಾಜರಿದ್ದರು.
ಹಣಮಂತ ಕಾರಾಮುಂಗೆ ಸ್ವಾಗತಿಸಿದರು. ದೇವಿದಾಸ ಮೇತ್ರೆ ನಿರೂಪಿಸಿದರು. ಕಸ್ತೂರಿ ಪಟಪಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.