ADVERTISEMENT

42 ಮಕ್ಕಳ ನೆರವಿಗೆ ನಿಂತ ಜಿಲ್ಲಾಡಳಿತ

ಪಾಲಕರ ಕಳೆದುಕೊಂಡ ಬಡ ಮಕ್ಕಳಿಗೆ ಬಾಲ ಸ್ವರಾಜ್‌ ಯೋಜನೆಯಲ್ಲಿ ಸಹಾಯ

ಚಂದ್ರಕಾಂತ ಮಸಾನಿ
Published 18 ಜೂನ್ 2021, 17:03 IST
Last Updated 18 ಜೂನ್ 2021, 17:03 IST

ಬೀದರ್: ಕೋವಿಡ್‌ ಬಂದೆರಗಿದ ನಂತರ ಜಿಲ್ಲೆಯಲ್ಲಿ ಕುಟುಂಬದ ಆರ್ಥಿಕ ಬೆನ್ನೆಲುಬಾಗಿದ್ದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲ ಮಕ್ಕಳು ತಾಯಿಯನ್ನು ಕಳೆದುಕೊಂಡರೆ, ಕೆಲವರು ತಂದೆಯನ್ನೇ ಕಳೆದುಕೊಂಡಿದ್ದಾರೆ.

ಎಳೆ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ನಿಭಾಯಿಸುವುದು ತಂದೆಗೆ ಕಷ್ಟವಾದರೆ, ಕುಟುಂಬದ ಆರ್ಥಿಕ ಶಕ್ತಿಯಾಗಿದ್ದ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ಮಕ್ಕಳನ್ನು ಸಲಹುವುದು ಸವಾಲಾಗಿದೆ. ಕೋವಿಡ್‌ ಆರಂಭದ ದಿನಗಳಲ್ಲಿ ಮಕ್ಕಳ ತಾಯಿ, ತಂದೆ ಕೋವಿಡ್‌ನಿಂದ ಮೃತಪಟ್ಟ ನಂತರ ಸಂಬಂಧಿಗಳು ಸಹ ಸೋಂಕಿನ ಭಯದಿಂದ ಸನಿಹಕ್ಕೆ ಬರಲಿಲ್ಲ. ಇದು ಮಕ್ಕಳನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿತ್ತು.

ಕೋವಿಡ್‌ನಿಂದ ಜಿಲ್ಲೆಯಲ್ಲಿ 393 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ 42 ಮಕ್ಕಳು ಪೋಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯ ಮೊರೆ ಹೋಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರ ಮೂಲಕ ಮಕ್ಕಳನ್ನು ಸಂಪರ್ಕಿಸಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ..

ADVERTISEMENT

‘ಬಾಲ ಸ್ವರಾಜ್‌ ಯೋಜನೆಯಲ್ಲಿ ₹3,500 ಮಾಸಾಶನ ಹಾಗೂ ಉಚಿತ ವಸತಿ ಸಹಿತ ಶಿಕ್ಷಣ ಕೊಡಲಾಗುವುದು. ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಮಕ್ಕಳಿಗೆ ಶಿಷ್ಯವೇತನ ಸಹ ದೊರೆಯಲಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗ ಹಿರೇಮಠ ಹೇಳುತ್ತಾರೆ.

ಬೀದರ್‌ನ ದೇವಿ ಕಾಲೊನಿಯ ಬಾಲಕ, ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯ ಇಬ್ಬರು ಮಕ್ಕಳು, ಹಣಕುಣಿಯ ಇಬ್ಬರು ಬಾಲಕಿಯರು ಪಾಲಕರನ್ನು ಕಳೆದುಕೊಂಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಅವರ ಮೇಲೆ ನಿಗಾ ಇಟ್ಟಿದ್ದಾರೆ’ ಎನ್ನುತ್ತಾರೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌರಿಶಂಕರ ಪರತಾಪುರೆ.

‘2020ರ ಏಪ್ರಿಲ್‌ನಿಂದ 2021ರ ಜೂನ್ 15ರ ವರೆಗೆ ನಡೆಸಿದ ಸಮೀಕ್ಷೆಯಲ್ಲಿ 143 ಮಕ್ಕಳಿಗೆ ತಂದೆ ಅಥವಾ ತಾಯಿ ಒಬ್ಬರೇ ಆಸರೆಯಾಗಿರುವುದು ಕಂಡು ಬಂದಿದೆ. ಬಾಲ ಸ್ವರಾಜ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಎಲ್ಲ ಮಕ್ಕಳಿಗೂ ಸರ್ಕಾರ ನೆರವು ಒದಗಿಸಲಿದೆ’ ಎಂದು ಹೇಳುತ್ತಾರೆ.

ಬೀದರ್‌ ಜಿಲ್ಲಾಡಳಿತ ಮಕ್ಕಳ ಸಂಕಷ್ಟವನ್ನು ಗಮನದಲ್ಲಿ ಇಟ್ಟುಕೊಂಡು 42 ಮಕ್ಕಳ ಬ್ಯಾಂಕ್‌ ಉಳಿತಾಯ ಖಾತೆಗೆ ತಲಾ ₹ 4 ಸಾವಿರದಂತೆ ಒಟ್ಟು ₹ 1.68 ಲಕ್ಷ ಜಮಾ ಮಾಡಿದೆ. ಸರ್ಕಾರದ ಮೂಲಕ ಅಗತ್ಯ ನೆರವು ಒದಗಿಸುವ ಭರವಸೆಯನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.