ADVERTISEMENT

ಭಾಲ್ಕಿ: ಕಲ್ಲಂಗಡಿ ಬೆಳೆದು ಕೈ ತುಂಬಾ ಆದಾಯ

₹ 7 ಲಕ್ಷ ಖರ್ಚು ವೆಚ್ಚ, ₹ 20 ಲಕ್ಷ ನಿವ್ವಳ ಲಾಭದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:31 IST
Last Updated 21 ಫೆಬ್ರುವರಿ 2026, 5:31 IST
ಮಾರಾಟಕ್ಕಾಗಿ ಕಲ್ಲಂಗಡಿ ಕಟಾವು ಮಾಡಿ ಗುಡ್ಡೆ ಹಾಕಿರುವ ರೈತ ಸುಖದೇವ ಬಿರಾದಾರ (ಬಲ)
ಮಾರಾಟಕ್ಕಾಗಿ ಕಲ್ಲಂಗಡಿ ಕಟಾವು ಮಾಡಿ ಗುಡ್ಡೆ ಹಾಕಿರುವ ರೈತ ಸುಖದೇವ ಬಿರಾದಾರ (ಬಲ)   

ಭಾಲ್ಕಿ: ತಾಲ್ಲೂಕಿನ ತೆಲಗಾಂವ ಗ್ರಾಮದ ಪ್ರಗತಿಪರ ರೈತ ಸುಖದೇವ ವೆಂಕಟರಾವ್ ಬಿರಾದಾರ ಅವರು ಏಳು ಎಕರೆ ಭೂಮಿಯಲ್ಲಿ ಕಲ್ಲಂಗಡಿ, ಕರಬೂಜ ಬೆಳೆದು ಸುಮಾರು ₹ 20 ಲಕ್ಷ ನಿವ್ವಳ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಈ ವರ್ಷ ಸುರಿದ ಅತಿಯಾದ ಮಳೆ ಮತ್ತು ಅತಿಯಾದ ಥಂಡಿ ಕಾರಣದಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಲ್ಲಂಗಡಿ, ಕರಬೂಜ ಬೆಳೆ ಬೆಳೆದಿಲ್ಲ. ಇನ್ನು ಶಿವರಾತ್ರಿ ಹಬ್ಬ ಹಾಗೂ ರಂಜಾನ್ ಹಬ್ಬದ ಆರಂಭವು ಇರುವುದರಿಂದ ಇವುಗಳಿಗೆ ಸಹಜವಾಗಿ ಬೇಡಿಕೆ, ಬೆಲೆ ಹೆಚ್ಚಿದ್ದು ರೈತರಿಗೆ ಹೆಚ್ಚಿನ ಲಾಭ ಸಿಗುತ್ತಿದೆ.

‘ನಮ್ಮ ಕುಟುಂಬಕ್ಕೆ ಒಟ್ಟು 32 ಎಕರೆ ಭೂಮಿ ಇದೆ. ಉದ್ದು, ಹೆಸರು, ಸೊಯಾಬೀನ್, ಕಬ್ಬು, ತೊಗರಿ, ಕಡಲೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತೇವೆ. ಕಳೆದ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ 5 ಎಕರೆ ಹೊಲದಲ್ಲಿ ಹುಮನಾಬಾದ್ ತಾಲ್ಲೂಕಿನ ಚನ್ನಳ್ಳಿ ಗ್ರಾಮದ ರೈತ ರಾಜಶೇಖರ ಪಾಟೀಲ ಅವರ ನರ್ಸರಿಯಿಂದ ಪ್ರತಿ ಸಸಿಗೆ ₹ 1.90 ನಂತೆ 42 ಸಾವಿರ ಸಸಿಗಳನ್ನು ಖರೀದಿಸಿದ್ದೇನೆ. ಪ್ರತಿ ಎಕರೆಯಲ್ಲಿ ಆರು ಸಾವಿರ ಸಸಿಗಳನ್ನು ನೆಡಲಾಗಿದೆ’ ಎಂದು ಅನ್ನದಾತ ಸುಖದೇವ ಬಿರಾದರ ತಿಳಿಸಿದರು.

ADVERTISEMENT

‘ಪ್ರತಿ ಎಕರೆ ಬೆಳೆಗೆ ಸುಮಾರು ಒಂದು ಲಕ್ಷ ರೂಪಾಯಿ ಖರ್ಚು ವೆಚ್ಚ ಇದೆ. ಹಾಗಾಗಿ 7 ಎಕರೆಗೆ ಸುಮಾರು ಏಳು ಲಕ್ಷ ರೂಪಾಯಿ ಖರ್ಚಾಗಿದೆ. ಕಲ್ಲಂಗಡಿ ಸಸಿ ನಾಟಿಗೂ ಮೊದಲು ಭೂಮಿ ಹದ ಮಾಡಿ ಗೊಬ್ಬರ ನೀಡಿದ್ದೆ. ಸಸಿಯಿಂದ ಸಸಿಗೆ 2 ಅಡಿ, ಸಾಲಿನಿಂದ ಸಾಲಿಗೆ 6 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಿದ್ದೇನೆ. ದಿಬ್ಬ ಮಾಡಿ ಪ್ಲಾಸ್ಟಿಕ್‌ ಮಲ್ಚಿಂಗ್‌ ಅಳವಡಿಸಿದ್ದರಿಂದ ಕಳೆ ಬಂದಿಲ್ಲ. ಸಸಿ ನೆಡುವ ಜಾಗದಲ್ಲಿ ಪ್ಲಾಸ್ಟಿಕ್‌ ಹಾಳೆಗೆ ರಂಧ್ರ ಕೊರೆದು ಗೊಬ್ಬರ ನೀಡಿದ ಮೂರು ದಿನಗಳ ಬಳಿಕ ಅಲ್ಲಿ ಸಸಿ ನಾಟಿ ಮಾಡಿದ್ದೇನೆ’ ಎನ್ನುತ್ತಾರೆ ಬಿರಾದಾರ.

ಒಂದು ಕಲ್ಲಂಗಡಿ ಹಣ್ಣು ಸರಾಸರಿ 3ರಿಂದ 6 ಕೆ.ಜಿ ತೂಕ ಹೊಂದಿದೆ. ಕಲ್ಲಂಗಡಿ ಬೆಳೆಯ ಒಟ್ಟು 2 ಕಟಿಂಗ್‌ನಿಂದ ಪ್ರತಿ ಎಕರೆಗೆ ಸುಮಾರು 30 ಟನ್ ಹಣ್ಣು ಇಳುವರಿ ಪಡೆದಿದ್ದೇನೆ. ಇನ್ನು ಕರಬೂಜ ಪ್ರತಿ ಎಕರೆಗೆ 17 ಟನ್ ಇಳುವರಿ ದೊರೆತಿದೆ. ಹುಪಳಾ ಗ್ರಾಮದ ವರ್ತಕ ಫಾರೂಕ್ ಅವರು ಸ್ಥಳದಲ್ಲೇ ಕಲ್ಲಂಗಡಿ ಬೆಳೆಯನ್ನು ಕೆ.ಜಿ.ಗೆ ₹ 21 , ಕರಬೂಜ ಕೆ.ಜಿ.ಗೆ ₹ 18.50ನಂತೆ ಖರೀದಿ ಮಾಡಿ, ಹೈದರಾಬಾದ್, ಪುಣೆ, ದೆಹಲಿ ಸೇರಿದಂತೆ ವಿವಿಧ ಮಹಾನಗರಗಳಿಗೆ ರವಾನಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 3 ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಕಟಾವು ಆಗಿದ್ದು, ಸುಮಾರು ₹ 12 ಲಕ್ಷ ಆದಾಯ ದೊರೆತಿದೆ. ಇನ್ನು ನಾಲ್ಕು ಎಕರೆಯ ಬೆಳೆಯಿಂದ ಸುಮಾರು ₹ 18 ಲಕ್ಷ ರೂಪಾಯಿ ಲಾಭ ದೊರೆಯುವ ಖಾತರಿ ಇದೆ. ಹಾಗಾಗಿ, 60 ರಿಂದ 65 ದಿನಗಳಲ್ಲಿ ಸುಮಾರು 20 ಲಕ್ಷ ರೂಪಾಯಿ ನಿವ್ವಳ ಲಾಭ ದೊರೆತಂತಾಗಲಿದೆ ಎಂದು ರೈತ ಸುಖದೇವ ಬಿರಾದಾರ ಸಂತಸ ಹಂಚಿಕೊಂಡರು.

ರೈತ ಸುಖದೇವ ಬಿರಾದರ ಅವರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು, ಬೆಳೆಗಳಿಗೆ ಸೂಕ್ತ ನಿರ್ವಹಣೆ ಮಾಡಿ ಗುಣಾತ್ಮಕ ಗೊಬ್ಬರ ಬಳಕೆ ಮಾಡಿದ್ದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಐಸಿಎಲ್ ಕಂಪನಿಯ ಆಗ್ರೋನೋಮಿಸ್ಟ್ ಸುದೀಪ ತೂಗಾವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.