ADVERTISEMENT

ಒಳಮೀಸಲಾತಿಯಲ್ಲಿ ಸಮಾಜಕ್ಕೆ ಅನ್ಯಾಯ: ಶಾಸಕ ಪ್ರಭು ಚವಾಣ್ ಆರೋಪ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 6:30 IST
Last Updated 29 ಅಕ್ಟೋಬರ್ 2025, 6:30 IST
ಔರಾದ್‌ನ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಬಂಜಾರಾ ಸಮಾಜದ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ಮಾತನಾಡಿದರು
ಔರಾದ್‌ನ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಬಂಜಾರಾ ಸಮಾಜದ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ಮಾತನಾಡಿದರು   

ಔರಾದ್: ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾತ್ರಿ ನಡೆದ ಬಂಜಾರಾ ಸಮಾಜದ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಚರ್ಚೆ ನಡೆಯಿತು.

ಸಭೆ ಉದ್ಘಾಟಿಸಿದ ಶಾಸಕ ಪ್ರಭು ಚವಾಣ್, ಕಾಂಗ್ರೆಸ್ ಸರ್ಕಾರ ಹಿಂದುಳಿದಿರುವ ಬಂಜಾರಾ, ಭೋವಿ, ಕೊರಮ, ಕೊರಚ ಸಮಾಜಗಳನ್ನು ಕಡೆಗಣಿಸುತ್ತಾ ಬಂದಿದೆ. ಹಿಂದೊಮ್ಮೆ ಈ ಸಮಾಜಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ಹಾಕುವ ಪ್ರಯತ್ನ ಮಾಡಿದರೂ ಅದೂ ಸಾಧ್ಯವಾಗಿಲ್ಲ ಎಂದು ಹೇಳಿದರು.

ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ನಾಲ್ಕು ಸಮಾಜಕ್ಕೆ ಶೇ 4.5ರಷ್ಟು ಮೀಸಲಾತಿ ಕೊಟ್ಟಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಈ ನಾಲ್ಕು ಸಮುದಾಯ ಜತೆಗೆ ಇತರೆ 59 ಸಮುದಾಯಗಳನ್ನು ಸೇರಿಸಿ ಬರೀ ಶೇ 5ರಷ್ಟು ಮೀಸಲಾತಿ ಕೊಟ್ಟು ಘೋರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದಲ್ಲಿ ಬಂಜಾರ ಸಮುದಾಯವು ಇನ್ನೂ ಸಾಕಷ್ಟು ಹಿಂದುಳಿದಿದೆ. ವಲಸೆ, ಅನಕ್ಷರತೆ, ಬಡತನದಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ನಾನು ಸಮಾಜದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಸಮಾಜ ಬಾಂಧವರು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೇ ಗೌರವಯುತವಾಗಿ ಬದುಕಬೇಕು. ಯಾವುದೇ ದೂರು ದುಮ್ಮಾನಗಳಿಗೆ ಆಸ್ಪದ ಕೊಡಬಾರದು’ ಎಂದು ಹೇಳಿದರು.

ಸಮಾಜದ ಮುಖಂಡ ಮಾರುತಿ ಚವಾಣ್, ಪ್ರದೀಪ ಪವಾರ್, ಸಚಿನ್ ರಾಠೋಡ್, ಸುಜಿತ್ ರಾಠೋಡ್, ಧನಾಜಿ ರಾಠೋಡ್, ಪ್ರತೀಕ್ ಚವಾಣ್, ಸೂರ್ಯಕಾಂತ ಪವಾರ್, ಪ್ರಹ್ಲಾದ ರಾಠೋಡ್, ಸೋನಾಜಿ ರಾಠೋಡ್, ಬಾಬು ರಾಠೋಡ್, ವಸಂತ ರಾಠೋಡ್, ರಮೇಶ ಜಾಧವ್‌ ಸೇರಿದಂತೆ ತಾಲ್ಲೂಕಿನ ವಿವಿಧೆಡೆಯ ಬಂಜಾರಾ ಸಮಾಜದವರು ಪಾಲ್ಗೊಂಡಿದ್ದರು.