ADVERTISEMENT

ಬ್ಯಾಂಕ್‌ ನೌಕರರಿಂದ ಪ್ರತಿಭಟನಾ ಮೆರವಣಿಗೆ

ಮುಷ್ಕರ: ಎಟಿಎಂಗಳ ಮುಂದೆ ಗ್ರಾಹಕರ ಸಾಲು, ಪರದಾಟ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 14:14 IST
Last Updated 31 ಜನವರಿ 2020, 14:14 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ಒಕ್ಕೂಟದ ನೇತೃತ್ವದಲ್ಲಿ ಬ್ಯಾಂಕ್‌ ನೌಕರರು ಬೀದರ್‌ನಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ಒಕ್ಕೂಟದ ನೇತೃತ್ವದಲ್ಲಿ ಬ್ಯಾಂಕ್‌ ನೌಕರರು ಬೀದರ್‌ನಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಬೀದರ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ಒಕ್ಕೂಟದ ನೇತೃತ್ವದಲ್ಲಿ ಬ್ಯಾಂಕ್‌ ನೌಕರರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಎಸ್‌ಬಿಐ ಪ್ರಾದೇಶಿಕ ಕಚೇರಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಹರಳಯ್ಯ ವೃತ್ತ, ಅಂಬೇಡ್ಕರ್ ವೃತ್ತ, ಭಗತ್‌ಸಿಂಗ್‌ ವೃತ್ತದ ಮಾರ್ಗವಾಗಿ ಮತ್ತೆ ಬ್ಯಾಂಕ್‌ ಆವರಣಕ್ಕೆ ಬಂದರು. ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

2017ರ ನವೆಂಬರ್‌ನಿಂದ ಪರಿಷ್ಕೃತ ವೇತನ ಕೊಡಬೇಕು. ವಾರದಲ್ಲಿ ಐದು ದಿನ ಬ್ಯಾಂಕ್ ಕಾರ್ಯ ನಿರ್ವಹಣೆಗೆ ಆದೇಶ ಹೊರಡಿಸಬೇಕು. ಶೇ 20ರಷ್ಟು ವೇತನ ಹೆಚ್ಚಳ ಮಾಡಬೇಕು. ನೌಕರರ ಪಿಂಚಣಿ ಪರಿಷ್ಕರಣೆ ಮಾಡಬೇಕು. ಕುಟುಂಬ ಪಿಂಚಣಿ ಉತ್ತೇಜನ ನೀಡಬೇಕು. ಸಿಬ್ಬಂದಿ ಕಲ್ಯಾಣ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಿಂದೆ ಬ್ಯಾಂಕ್‌ ನೌಕರರು ಮುಷ್ಕರ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ನೌಕರರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಕೇಂದ್ರ ಹಣಕಾಸು ಕಾರ್ಯದರ್ಶಿ ಭರವಸೆಯನ್ನೂ ನೀಡಿದ್ದರು. ಆದರೆ, ನಂತರದಲ್ಲಿ ಭರವಸೆ ಈಡೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್‌ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುತ್ತಿದೆ. ಶನಿವಾರ ಮತ್ತೆ ನಗರದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಪ್ರತಿಭಟನಾಕಾರರು ಹೇಳಿದರು.

ನಂತರ ನೌಕರರು ಲೀಡ್‌ ಬ್ಯಾಂಕ್‌ ಆವರಣದಲ್ಲಿ ಸಂಜೆಯ ವರೆಗೂ ಧರಣಿ ನಡೆಸಿದರು.

ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ಒಕ್ಕೂಟದ ಕಾರ್ಯದರ್ಶಿ ಸಂತೋಷ ಕೋರೆ, ಎಸ್‌ಬಿಐನ ರಮೇಶ ಶಿಂದೆ, ಲೀಡ್‌ ಬ್ಯಾಂಕ್‌ನ ಸಂತೋಷ, ಗುಂಪಾ ಶಾಖೆಯ ಬಸವರಾಜ ಕೋಳಿ, ಭಾಲ್ಕಿಯ ಕೆನರಾ ಬ್ಯಾಂಕಿನ ಆರ್‌.ಶ್ರವಣಕುಮಾರ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.

ಎಟಿಎಂಗಳಲ್ಲಿ ಹಣ ಖಾಲಿ: ಬ್ಯಾಂಕ್‌ ಮುಷ್ಕರದಿಂದಾಗಿ ಗ್ರಾಹಕರು ಪರದಾಡುವಂತಾಯಿತು. ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ಒಕ್ಕೂಟವು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದ ಸುದ್ದಿ ತಿಳಿದು ಓಲ್ಡ್‌ಸಿಟಿಯಲ್ಲಿ ಗುರುವಾರ ಸಂಜೆಯೇ ಬಹುತೇಕ ಜನ ಎಟಿಎಂಗಳಿಂದ ಹಣ ಪಡೆದದ್ದರಿಂದ ಶುಕ್ರವಾರ ಬಹುತೇಕ ಎಟಿಎಂಗಳಲ್ಲಿ ಹಣ ಇರಲಿಲ್ಲ.

ಬಹುತೇಕ ಗ್ರಾಹಕರು ಬಡಾವಣೆಗಳಲ್ಲಿನ ಎಟಿಎಂಗಳಿಗೆ ತೆರಳಿ ಹಣ ಪಡೆದುಕೊಳ್ಳುತ್ತಿರುವುದು ಕಂಡು ಬಂದಿತ್ತು. ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಎಸ್‌ಬಿಐ ಪ್ರಾದೇಶಿಕ ಕಚೇರಿ ಆವರಣದಲ್ಲಿರುವ ಎಟಿಎಂನಲ್ಲಿ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಂಡರು.

ಚಿಲ್ಲರೆ ವ್ಯಾಪಾರಿಗಳು, ವಹಿವಾಟುದಾರರು ಸಮಸ್ಯೆ ಎದುರಿಸಬೇಕಾಯಿತು. ಕೆಲವರು ಫೋನ್‌ಪೇ, ಗೂಗಲ್‌ಪೇ ಮೂಲಕ ವ್ಯವಹಾರ ನಡೆಸಿದರು. ನಿತ್ಯ ಬ್ಯಾಂಕ್‌ಗೆ ಹಣ ಪಾವತಿಸುವವರು ಸಹ ತೊಂದರೆ ಅನುಭವಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.