ADVERTISEMENT

Republic Day 2026| ಬೀದರ್ ಜಿಲ್ಲೆಯಲ್ಲಿ 250 ಕಿ.ಮೀ ಬಸವ ಪಥ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 9:00 IST
Last Updated 26 ಜನವರಿ 2026, 9:00 IST
<div class="paragraphs"><p>ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ರಾಷ್ಟ್ರ ಧ್ವಜಕ್ಕೆ ಗೌರವ ಸಮರ್ಪಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು</p></div>

ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ರಾಷ್ಟ್ರ ಧ್ವಜಕ್ಕೆ ಗೌರವ ಸಮರ್ಪಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು

   

ಬೀದರ್‌: ‘ಬೀದರ್‌ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳನ್ನು ಒಂದೇ ಪಥದಲ್ಲಿ ಸಂಪರ್ಕ ಕಲ್ಪಿಸುವ 250 ಕಿ.ಮೀ ಉದ್ದದ ‘ಬಸವ ಪಥ’ ರಿಂಗ್‌ರೋಡ್‌ ನಿರ್ಮಿಸುವ ಯೋಜನೆ ರೂಪಿಸುವ ಪ್ರಸ್ತಾವ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ADVERTISEMENT

ಬರುವ ಬಜೆಟ್‌ನಲ್ಲಿ ‘ಬಸವ ಪಥ’ ಘೋಷಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗುವುದು. ಸರ್ಕಾರದ ಕೊಡುವ ಅನುದಾನದ ಜೊತೆಗೆ ಕೆಕೆಆರ್‌ಡಿಬಿ ಅನುದಾನ ಸಹ ಇದಕ್ಕೆ ಒದಗಿಸಲಾಗುವುದು. ರಿಂಗ್‌ರೋಡ್‌ ನಿರ್ಮಾಣದಿಂದ ಎಲ್ಲ ತಾಲ್ಲೂಕುಗಳ ನಡುವೆ ಉತ್ತಮ ಸಂಪರ್ಕ ವ್ಯವಸ್ಥೆ ಸಾಧ್ಯವಾಗಲಿದೆ. ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಕಾಮಗಾರಿಗೆ ಇದುವರೆಗೆ ₹400 ಕೋಟಿ ಖರ್ಚಾಗಿದೆ. ಇನ್ನೂ ₹100 ಕೋಟಿ ಬಿಡುಗಡೆಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುವುದು. ಮುಂದಿನ ವರ್ಷದ ಮಾರ್ಚ್‌ನೊಳಗೆ ಕಾಮಗಾರಿ ಮುಗಿಸಿ, ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಧ್ವಜಾರೋಹಣದ ನಂತರ ಚಿಣ್ಣರು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರಸ್ತುತಪಡಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿದರು.

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ, ಸಂಸದ ಸಾಗರ ಖಂಡ್ರೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬೀದರ್ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಆಯುಕ್ತ ಮುಕುಲ್ ಜೈನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಜರಿದ್ದರು.

ಒಂದು ಗಂಟೆ ಭಾಷಣ

ಸಚಿವ ಈಶ್ವರ ಬಿ. ಖಂಡ್ರೆ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ನಂತರ 9.16ಕ್ಕೆ ತಮ್ಮ ಭಾಷಣ ಆರಂಭಿಸಿ, ಬರೋಬ್ಬರಿ 10.16ಕ್ಕೆ ಮುಗಿಸಿದರು. ತಮ್ಮ ಸರ್ಕಾರದ ಸಾಧನೆಗಳು, ಜಿಲ್ಲೆಯಲ್ಲಿ ಕೈಗೊಂಡಿರುವ ಹಾಗೂ ಮುಂದಿನ ಹೊಸ ಯೋಜನೆಗಳ ಕುರಿತು ವಿಸ್ತೃತವಾದ ಮಾಹಿತಿ ಹಂಚಿಕೊಂಡರು.

ಕಾರಂಜಾ ಬಳಿ ‘ಏವಿಯರಿ’

ಕಾರಂಜಾ ಜಲಾಶಯದ ಸಮೀಪ ‘ಏವಿಯರಿ’ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹12 ಕೋಟಿ ಅನುದಾನ ನೀಡಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಲೋಹದ ಜಾಲರಿಯಿಂದ ನಿರ್ಮಾಣವಾಗುವ ಏವಿಯರಿಯಲ್ಲಿ ವಿವಿಧ ಬಗೆಯ ಪಕ್ಷಿಗಳನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಅಂಬೇಡ್ಕರ್‌ ಭವನದೊಂದಿಗೆ ‘ಬಸವ ಭವನ’

ಬೀದರ್‌–ಭಾಲ್ಕಿ ರಸ್ತೆಯ ಅತಿವಾಳ ಸಮೀಪದ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ನಿರ್ಮಾಣಕ್ಕೆ ಈ ವರ್ಷ ₹5 ಕೋಟಿ ಮೀಸಲಿಡಲಾಗುವುದು. ಕಾಮಗಾರಿಗೆ ತಕ್ಕಂತೆ ಅನುದಾನ ಬಿಡುಗಡೆಗೊಳಿಸಲಾಗುವುದು. ಇದರೊಂದಿಗೆ ಅಂಬೇಡ್ಕರ್‌ ಭವನದ ನಿರ್ಮಾಣಕ್ಕೆ ₹3 ಕೋಟಿ ಒದಗಿಸಲಾಗುವುದು. ಅಂಬೇಡ್ಕರ್‌ ಭವನದ ಮಾದರಿಯಲ್ಲಿ ‘ಬಸವ ಭವನ’ ಕೂಡ ನಿರ್ಮಿಸಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಬೀದರ್‌ ಕೋಟೆ ಅಭಿವೃದ್ಧಿಗೆ ₹25 ಕೋಟಿ

‘ಸಂಸದ ಸಾಗರ ಖಂಡ್ರೆ ಅವರ ಪ್ರಯತ್ನದಿಂದ ಬೀದರ್‌ ಕೋಟೆಗೆ ₹25 ಕೋಟಿ ಮಂಜೂರಾಗಿದ್ದು, ಅದರ ಅಭಿವೃದ್ಧಿ ಕಾರ್ಯ ಒಂದುವರೆ ತಿಂಗಳಲ್ಲಿ ಪ್ರಾರಂಭವಾಗಲಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಈಗಾಗಲೇ ಡಿಪಿಆರ್‌ ಸಿದ್ಧವಾಗುತ್ತಿದೆ. ಇನ್ನು, ಕರೇಜ್‌ ಅಭಿವೃದ್ಧಿಗೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ತಜ್ಞರ ತಂಡ ಕೆಲಸ ಮಾಡುತ್ತಿದೆ. ಈ ಹಿಂದಿನ ಜಿಲ್ಲಾಧಿಕಾರಿಯೊಬ್ಬರು ನೀಡಿದ ಅನುಮತಿ ಮೇರೆಗೆ ಕರೇಜ್‌ ಭಾಗದಲ್ಲಿ ದೇವಸ್ಥಾನದವರು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅದರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದವರಿಗೆ ಸೂಚನೆ ಕೊಡಲಾಗಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬೀದರ್‌ ನಗರದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಯಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಯಾರಾದರೂ ಭಾಗಿಯಾಗಿದ್ದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಸಾಗರ ಖಂಡ್ರೆಯಿಂದ ಪಾಪನಾಶಕ್ಕೆ ಅನುದಾನ

‘ಬೀದರ್‌ನ ಪಾಪನಾಶ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹22 ಕೋಟಿ ಅನುದಾನ ಮಂಜೂರು ಮಾಡಿದ್ದು, ಇದು ಸಂಸದ ಸಾಗರ ಖಂಡ್ರೆಯವರ ಪ್ರಯತ್ನದಿಂದ ಸಾಧ್ಯವಾಗಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಬರುವ ಫೆಬ್ರುವರಿ 7ರಂದು ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈಗಾಗಲೇ ಡಿಪಿಆರ್‌ ಸಿದ್ಧವಾಗಿದೆ ಎಂದು ಮಾಹಿತಿ ಹಂಚಿಕೊಂಡರು.

₹400 ಕೋಟಿ ನಗದು ಸಾಗಣೆ; ಪಾರದರ್ಶಕ ತನಿಖೆಗೆ ಆಗ್ರಹ

‘ಗೋವಾದಿಂದ ಮಹಾರಾಷ್ಟ್ರದ ಮಾರ್ಗವಾಗಿ ಕರ್ನಾಟಕದಿಂದ ಸಾಗಿಸಲು ಉದ್ದೇಶಿಸಿದ್ದ ₹400 ಕೋಟಿ ನಗದು ಸಾಗಣೆಯ ಪ್ರಕರಣದ ಬಗ್ಗೆ ಬಿಜೆಪಿ ಮುಖಂಡರು ವೃಥಾ ಆರೋಪ ಮಾಡುತ್ತಿರುವುದರ ಬದಲು ಈ ಪ್ರಕರಣವನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅವರನ್ನು ಒಳಗೊಂಡ ಎಸ್‌ಐಟಿಯಿಂದ ಪಾರದರ್ಶಕ ತನಿಖೆ ಮಾಡಿಸಬೇಕು. ಸತ್ಯಾಂಶ ಏನೆಂಬುದು ಜಗತ್ತಿಗೆ ಗೊತ್ತಾಗುತ್ತದೆ ಎಂದು ಸಚಿವ ಈಶ್ವರ ಬಿ. ಖಂಡರೆ ಆಗ್ರಹಿಸಿದರು.

ಹಣದ ಕಂಟೇನರ್‌ ಜಪ್ತಿ ಮಾಡಿದ ನಂತರ ಮಹಾರಾಷ್ಟ್ರ ಸರ್ಕಾರ ಎಫ್‌ಐಆರ್‌ ಏಕೆ ಮಾಡಲಿಲ್ಲ. ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಏನು ಮಾಡುತ್ತಿದ್ದರು. ಈಗೇಕೆ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಗೋವಾ, ಮಹಾರಾಷ್ಟ್ರದಲ್ಲಿ ಕಂಟೇನರ್‌ ಕ್ರಮಿಸಿದೆ. ಅಲ್ಲಿ ಯಾರ ಸರ್ಕಾರವಿದೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.