ADVERTISEMENT

SM Krishna: ಕೃಷ್ಣ ಕಾಲದಲ್ಲಿ ಕಲ್ಯಾಣ ಅಭಿವೃದ್ಧಿಗೆ ಮುನ್ನುಡಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಡಿಸೆಂಬರ್ 2024, 5:39 IST
Last Updated 11 ಡಿಸೆಂಬರ್ 2024, 5:39 IST
ಬಿ. ನಾರಾಯಣರಾವ್‌ ಅವರನ್ನು ಸಾಕ್ಷರತಾ ಮಿಷನ್‌ ಅಧ್ಯಕ್ಷರಾಗಿ ನೇಮಿಸಿ, ಅವರಿಗೆ ಪುಷ್ಪಗುಚ್ಛ ಕೊಟ್ಟು ಅಭಿನಂದಿಸಿದ ಎಸ್‌.ಎಂ. ಕೃಷ್ಣ 
ಬಿ. ನಾರಾಯಣರಾವ್‌ ಅವರನ್ನು ಸಾಕ್ಷರತಾ ಮಿಷನ್‌ ಅಧ್ಯಕ್ಷರಾಗಿ ನೇಮಿಸಿ, ಅವರಿಗೆ ಪುಷ್ಪಗುಚ್ಛ ಕೊಟ್ಟು ಅಭಿನಂದಿಸಿದ ಎಸ್‌.ಎಂ. ಕೃಷ್ಣ    

ಬೀದರ್‌: ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದ ಅಭಿವೃದ್ಧಿಗೆ ಮುನ್ನುಡಿ ಬರೆದವರು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ.

12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ ‘ಕಲ್ಯಾಣ ಕ್ರಾಂತಿ’ ನಡೆದಿತ್ತು. ಜಗತ್ತಿನ ಮೊಟ್ಟ ಮೊದಲ ಸಂಸತ್ತು ಎಂಬ ಹೆಗ್ಗಳಿಕೆ ಗಳಿಸಿರುವ ಅನುಭವ ಮಂಟಪ ಸ್ಥಾಪಿಸಿ, ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಬಸವಾದಿ ಶರಣರು ಓಡಾಡಿದ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕೆಂಬ ಬಲವಾದ ಕೂಗು ಎದ್ದಿತ್ತು. ಅಷ್ಟರಲ್ಲಾಗಲೇ ಕೂಡಲಸಂಗಮ ಅಭಿವೃದ್ಧಿ ಕಂಡಿತ್ತು. ಅದೇ ಮಾದರಿಯಲ್ಲಿ ಕಲ್ಯಾಣ ಕೂಡ ಅಭಿವೃದ್ಧಿ ಪಡಿಸಬೇಕೆಂಬ ಹಕ್ಕೊತ್ತಾಯ ಕೇಳಿ ಬಂದಿತ್ತು. ಅದಕ್ಕೆ ಸ್ಪಂದಿಸಿದವರು ಎಸ್‌.ಎಂ. ಕೃಷ್ಣ.

1999ರಿಂದ 2004ರವರೆಗೆ ಪೂರ್ಣ ಐದು ವರ್ಷಗಳವರೆಗೆ ಕೃಷ್ಣ ಮುಖ್ಯಮಂತ್ರಿ ಆಗಿ ಕೆಲಸ ನಿರ್ವಹಿಸಿದ್ದರು. ಅವರು ಮುಖ್ಯಮಂತ್ರಿಯಾದ ದಿನದಿಂದಲೂ ಕಲ್ಯಾಣದ ಅಭಿವೃದ್ಧಿಗೆ ಸತತ ಆಗ್ರಹಪೂರ್ವಕ ಮನವಿ ಕೇಳಿ ಬಂದಿತ್ತು. ಆದರೆ, ಅದಕ್ಕೆ ಸ್ಪಂದನೆ ಸಿಕ್ಕಿದ್ದು 2002ನೇ ಇಸ್ವಿಯಲ್ಲಿ.

ADVERTISEMENT

ಬಸವಕಲ್ಯಾಣ ಹಾಗೂ ಅದರ ಸುತ್ತಮುತ್ತಲಿನ ಬಸವಾದಿ ಶರಣರು ಓಡಾಡಿದ ಸ್ಥಳಗಳು, ಸ್ಮಾರಕಗಳ ಅಭಿವೃದ್ಧಿಗೆ ತೀರ್ಮಾನಿಸಿ 2002ರಲ್ಲಿ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಂದಿನ ಸಿಎಂ ಎಸ್‌.ಎಂ. ಕೃಷ್ಣ ಮೊಹರು ಹಾಕಿದರು. ಆದರೆ, ಅದಕ್ಕೆ ಕಾಯ್ದೆಯ ಸ್ವರೂಪ ಸಿಕ್ಕಿದ್ದು ಎನ್‌. ಧರ್ಮಸಿಂಗ್‌ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ.

ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಗೊಂಡ ನಂತರ ಕಲ್ಯಾಣ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ನಂತರ ಬಂದ ಎಲ್ಲ ಸರ್ಕಾರಗಳು ಕಲ್ಯಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾಲಕಾಲಕ್ಕೆ ಅನುದಾನ ನೀಡುತ್ತ ಬಂದವು. ಕಲ್ಯಾಣದಲ್ಲಿ ಬಹುತೇಕ ಶರಣರ ಸ್ಮಾರಕಗಳು ಅಭಿವೃದ್ಧಿಗೊಂಡಿವೆ. ಈಗ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ಕೂಡ ಭರದಿಂದ ನಡೆಯುತ್ತಿದೆ. ಕಲ್ಯಾಣದ ಅಭಿವೃದ್ಧಿಯ ಕುರಿತು ಚರ್ಚೆಗಳು ನಡೆದಾಗಲೆಲ್ಲ ಎಸ್‌.ಎಂ. ಕೃಷ್ಣ ಅವರನ್ನು ಇಂದಿಗೂ ಈ ಭಾಗದ ಜನ ಸ್ಮರಿಸಿಕೊಳ್ಳುತ್ತಾರೆ.

ಹುಮನಾಬಾದ್‌ ಉಪಚುನಾವಣೆ ಗೆಲ್ಲಲು ಹಳ್ಳಿ ಸುತ್ತಾಡಿದ್ದ ಕೃಷ್ಣ

2003ರಲ್ಲಿ ಹುಮನಾಬಾದ್‌ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ರಾಜಶೇಖರ ಪಾಟೀಲ ಪರ ಪ್ರಚಾರಕ್ಕಾಗಿ ಅಂದಿನ ಸಿಎಂ ಎಸ್‌.ಎಂ. ಕೃಷ್ಣ ಅವರು ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಎಸ್‌.ಎಂ. ಕೃಷ್ಣ ಅವರು ಹುಮನಾಬಾದ್‌ ಕ್ಷೇತ್ರದ ಅನೇಕ ಹಳ್ಳಿಗಳಿಗೆ ಭೇಟಿ ಕೊಟ್ಟು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದರು.

ಚುನಾವಣೆಯಲ್ಲಿ ಅಂತಿಮವಾಗಿ ರಾಜಶೇಖರ ಪಾಟೀಲ ಗೆಲುವು ಕೂಡ ಸಾಧಿಸಿದ್ದರು. ‘ಹುಮನಾಬಾದ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಪ್ರಚಾರಕ್ಕಾಗಿ ಎಸ್‌.ಎಂ. ಕೃಷ್ಣ ಅವರು ಜಿಲ್ಲೆಗೆ ಬಂದಿದ್ದರು. ಅನೇಕ ಕಡೆ ಪ್ರಚಾರ ಸಭೆಗಳನ್ನು ನಡೆಸಿದ್ದರು. ಆ ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದಿತ್ತು’ ಎಂದು ಅಂದಿನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಬುಳ್ಳಾ ತಿಳಿಸಿದ್ದಾರೆ.

‘ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು ಕೃಷ್ಣ ಅವರ ಕಾಲದಲ್ಲಿ. ಕಮಠಾಣ ಸಮೀಪದ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೂ ಕೃಷ್ಣ ಅವರೇ ಕಾರಣರು. ಈ ಹಿಂದೆ ಪಶು ಕಾಲೇಜು ಮಾತ್ರ ಇತ್ತು. ಅದನ್ನು ವಿಶ್ವವಿದ್ಯಾಲಯವಾಗಿ ಬದಲಿಸಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ ಇತ್ತು. ಅದಕ್ಕೆ ಸ್ಪಂದಿಸಿದವರು ಕೃಷ್ಣ’ ಎಂದು ಬುಳ್ಳಾ ನೆನಪು ಮಾಡಿಕೊಂಡಿದ್ದಾರೆ.

Cut-off box - ಔರಾದ್‌ಗೆ ಭೇಟಿ ಕೊಟ್ಟಿದ್ದ ಕೃಷ್ಣ ಎಸ್‌.ಎಂ. ಕೃಷ್ಣ ಅವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದರೂ ಬೀದರ್‌ ಜಿಲ್ಲೆಗೆ ಭೇಟಿ ಕೊಟ್ಟಿದ್ದು ಎರಡು ಸಲ ಮಾತ್ರ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ. 2003ರಲ್ಲಿ ಹುಮನಾಬಾದ್‌ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಪ್ರಚಾರಕ್ಕೆ. ಅದು ಬಿಟ್ಟರೆ ಅದೇ ಸಾಲಿನಲ್ಲಿ ಪ್ರವಾಹಕ್ಕೆ ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕಿನಲ್ಲಿ ಸಾಕಷ್ಟು ಬೆಳೆ ನಷ್ಟವಾಗಿ ಆಸ್ತಿ ಹಾನಿಯಾಗಿತ್ತು. ಅದರ ಪರಿಶೀಲನೆಗೆ ಕೃಷ್ಣ ಬಂದಿದ್ದರು.

Cut-off box - ಬಿ. ನಾರಾಯಣರಾವ್‌ಗೆ ಸಾಕ್ಷರತಾ ಮಿಷನ್‌ ಹೊಣೆ ಬೀದರ್‌ ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕರಾಗಿದ್ದ ಬಿ. ನಾರಾಯಣರಾವ್‌ ಅವರಿಗೆ ಎಸ್‌.ಎಂ. ಕೃಷ್ಣ ಅವರು ತಮ್ಮ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿ ಕೊಟ್ಟಿದ್ದರು. ಸಾಕ್ಷರತಾ ಮಿಷನ್‌ ಯೋಜನೆಗೆ ನಾರಾಯಣರಾವ್‌ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆ ಕೊಟ್ಟಿದ್ದರು. ‘ಹಿಂದುಳಿದ ವರ್ಗಗಳ ನಾಯಕರಾಗಿದ್ದ ನಾರಾಯಣರಾವ್‌ ಅವರಿಗೆ ಯಾರು ಕೂಡ ‘ಗಾಡ್‌ ಫಾದರ್‌’ ಇರಲಿಲ್ಲ. ಸ್ವಂತ ಶ್ರಮದಿಂದ ಮೇಲೆ ಬಂದವರು. ಅವರಿಗೆ ಸಾಕ್ಷರತಾ ಮಿಷನ್‌ ಅಧ್ಯಕ್ಷರಾಗಿ ಎಸ್‌.ಎಂ. ಕೃಷ್ಣ ನೇಮಕ ಮಾಡಿದ್ದರು. ಆ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಾರಾಯಣರಾವ್‌ ನಿಭಾಯಿಸಿದ್ದರು. ಅದರ ಮೂಲಕವೇ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡರು. ಆನಂತರ ಬಸವಕಲ್ಯಾಣ ಕ್ಷೇತ್ರದ ಶಾಸಕರೂ ಆದರು. ಕೃಷ್ಣ ಅವರಿಗಿಂತ ಕಿರಿಯ ವಯಸ್ಸಿನ ನಾರಾಯಣರಾವ್‌ ಹಾಗೂ ಅವರನ್ನು ಮುಂಚೂಣಿಗೆ ತಂದ ಎಸ್‌ಎಂಕೆ ಇಬ್ಬರೂ ಈಗ ನಮ್ಮ ನಡುವೆ ಇಲ್ಲ’ ಎಂದು ನೆನಕೆ ಮಾಡುತ್ತಾರೆ ಹಿರಿಯ ಪತ್ರಕರ್ತ ಕಾಜಿ ಅಲಿಯೊದ್ದೀನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.