ಬೀದರ್: ‘ಜಿಲ್ಲೆಯಲ್ಲಿ ಸೆ. 3ರಂದು ಅರ್ಥಪೂರ್ಣವಾಗಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ನಗರದ ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಇತರೆ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ರಾಜ್ಯ ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಪ್ರಯುಕ್ತ ಬಸವ ಸಂಸ್ಕೃತಿಯನ್ನು ಮನೆ ಮನೆಗೆ ತಲುಪಿಸಲು ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.1 ರಿಂದ ಅಕ್ಟೋಬರ್ 1ರ ವರೆಗೆ ಅಭಿಯಾನ ನಡೆಯಲಿದೆ. ಅಭಿಯಾನ ಪ್ರತಿ ಜಿಲ್ಲೆಯಲ್ಲಿ ಒಂದು ದಿನ ಜರುಗಲಿದೆ. ಅಭಿಯಾನದ ಯಶಸ್ವಿಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಅಭಿಯಾನದ ರಥ ಸೆ. 3ರಂದು ಬೀದರ್‌ಗೆ ಬರಲಿದೆ. ಅಭಿಯಾನವು ವಿದ್ಯಾರ್ಥಿಗಳೊಂದಿಗೆ ಸಂವಾದ, ಬಸವ ಸಂಸ್ಕೃತಿ ಪಥ ಸಂಚಲನ, ಬಹಿರಂಗ ಸಭೆ, 'ಜಂಗಮದೆಡೆಗೆ' ನಾಟಕ ಪ್ರದರ್ಶನ, ವಚನ ನೃತ್ಯ, ವಚನ ಸಂಗೀತ ಒಳಗೊಂಡಿದೆ ಎಂದು ತಿಳಿಸಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಕೌಠಾ ಬಸವ ಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು, ಬಸವಕಲ್ಯಾಣದ ಬಸವ ಮಹಾಮನೆಯ ಸಿದ್ಧರಾಮೇಶ್ವರ ಸ್ವಾಮೀಜಿ, ಮಹಾಲಿಂಗ ದೇವರು, ಮಾತೆ ಮೈತ್ರಾದೇವಿ, ಭಾರತೀಯ ಬಸವ ಬಳಗದ ರಾಜ್ಯ ಘಟಕದ ಅಧ್ಯಕ್ಷ ಬಾಬುವಾಲಿ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಪ್ರಮುಖರಾದ ಶ್ರೀಕಾಂತ ಸ್ವಾಮಿ, ರಾಜೇಂದ್ರಕುಮಾರ ಗಂದಗೆ, ಸುವರ್ಣಾ ಚಿಮಕೋಡೆ, ಮಲ್ಲಮ್ಮ ಆರ್. ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.